ಕಾರ್ಡಿಫ್[ಜು.06]: ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಇಂದು ಕಾರ್ಡಿಫ್’ನಲ್ಲಿ ಎರಡನೇ ಟಿ20 ಪಂದ್ಯವಾಡಲು ಸಜ್ಜಾಗಿವೆ. ಮೊದಲ ಪಂದ್ಯದಲ್ಲಿ ಕುಲ್ದೀಪ್ ಮಾಂತ್ರಿಕ ಸ್ಪಿನ್ ಹಾಗೂ ರಾಹುಲ್ ಅಜೇಯ ಶತಕದ ನೆರವಿನಿಂದ ಟೀಂ ಇಂಡಿಯಾ 8 ವಿಕೆಟ್’ಗಳ ಜಯ ಸಾಧಿಸಿತ್ತು. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಮೊದಲ ಪಂದ್ಯವನ್ನು ಗೆದ್ದಿರುವ ವಿರಾಟ್ ಪಡೆ, ಇಂದಿನ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಉತ್ಸಾಹದಲ್ಲಿದ್ದರೆ, ಇಂಗ್ಲೆಂಡ್ ಶತಾಯಗತಾಯ ಇಂದಿನ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಕಮ್’ಬ್ಯಾಕ್ ಮಾಡುವ ಒತ್ತಡಕ್ಕೆ ಸಿಲುಕಿದೆ. 

ಇಂದಿನ ಪಂದ್ಯವು ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ. ರೈನಾ, ಧೋನಿ, ರೋಹಿತ್ ಶರ್ಮಾ ಸೇರಿದಂತೆ ಹಲವು ಕ್ರಿಕೆಟಿಗರು ದಾಖಲೆ ನಿರ್ಮಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅಷ್ಟಕ್ಕೂ ಇಂದು ನಿರ್ಮಾಣವಾಗುವ ದಾಖಲೆಗಳಾವು ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...

2- ಸುರೇಶ್ ರೈನಾ ಇನ್ನೆರಡು ಸಿಕ್ಸರ್ ಸಿಡಿಸಿದರೆ ಟಿ20 ಕ್ರಿಕೆಟ್’ನಲ್ಲಿ 300 ಸಿಕ್ಸರ್ ಸಿಡಿಸಿದ ದಾಖಲೆ ಬರೆಯಲಿದ್ದಾರೆ. ರೋಹಿತ್ ಶರ್ಮಾ[308] ಬಳಿಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಕ್ರಿಕೆಟಿಗ ಎನ್ನುವ ಶ್ರೇಯಕ್ಕೆ ರೈನಾ ಪಾತ್ರರಾಗಲಿದ್ದಾರೆ.

3- ಮಹೇಂದ್ರ ಸಿಂಗ್ ಧೋನಿ ಇನ್ನು ಮೂರು ಸಿಕ್ಸರ್ ಸಿಡಿಸಿದರೆ ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ 50 ಸಿಕ್ಸರ್ ಪೂರೈಸಿದಂತಾಗುತ್ತದೆ. ಈ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 50 ಸಿಕ್ಸರ್ ಸಿಡಿಸಿದ 4ನೇ ಭಾರತೀಯ ಕ್ರಿಕೆಟಿಗ ಎಂಬ ಗೌರವಕ್ಕೆ ಧೋನಿ ಪಾತ್ರರಾಗಲಿದ್ದಾರೆ. ಈ ಮೊದಲು ರೋಹಿತ್[84], ಯುವರಾಜ್ ಸಿಂಗ್[74] ಹಾಗೂ ಸುರೇಶ್ ರೈನಾ[57] ಐವತ್ತಕ್ಕೂ ಹೆಚ್ಚು ಸಿಕ್ಸರ್ ಚಚ್ಚಿದ್ದಾರೆ.

4- ಇಂಗ್ಲೆಂಡ್ ಪಾಲಿಗೆ ಸೋಫಿಯಾ ಗಾರ್ಡನ್ ಅದೃಷ್ಟದ ಅಂಗಳ. ಇದುವರೆಗೆ ಇಂಗ್ಲೆಂಡ್ ಇಲ್ಲಿ 4 ಟಿ20 ಪಂದ್ಯಗಳನ್ನಾಡಿದ್ದು ಎಲ್ಲಾ ಪಂದ್ಯಗಳಲ್ಲೂ ಜಯದ ನಗೆ ಬೀರಿದೆ. ಎರಡು ಬಾರಿ ಪಾಕಿಸ್ತಾನ ವಿರುದ್ಧ ಜಯದ ಸವಿಯುಂಡಿದ್ದರೆ, ತಲಾ ಒಮ್ಮೊಮ್ಮೆ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದೆ.

19- ಹಿಟ್’ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಇಂದು ಮತ್ತೊಂದು ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಇನ್ನು ಕೇವಲ 19 ರನ್ ಬಾರಿಸಿದರೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 2 ಸಾವಿರ ರನ್ ಪೂರೈಸಿದವರ ಕ್ಲಬ್ ಸೇರಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಎರಡನೇ ಹಾಗೂ ವಿಶ್ವದ 5ನೇ ಬ್ಯಾಟ್ಸ್’ಮನ್ ಎಂಬ ಸಾಧನೆಗೆ ರೋಹಿತ್ ಪಾತ್ರರಾಗಲಿದ್ದಾರೆ.