ಲಂಡನ್[ಜು.13]: ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್’ಮನ್ ಅಲೆಕ್ಸ್ ಹೇಲ್ಸ್ ಭಾರತ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಈಗಾಗಲೇ ಮೊದಲ ಪಂದ್ಯದಲ್ಲಿ ಸೋತು ಕಂಗೆಟ್ಟಿರುವ ಇಂಗ್ಲೆಂಡ್ ತಂಡಕ್ಕೆ ಇದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಹೇಲ್ಸ್ ಅವರಿಗೆ ಮೊದಲ ಪಂದ್ಯದ ಮಟ್ಟಿಗೆ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ಮೊದಲ ಪಂದ್ಯವನ್ನು ಹೇಲ್ಸ್ ಆಡಿರಲಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಕಳೆದ ತಿಂಗಳಷ್ಟೇ ನಡೆದ ಏಕದಿನ ಪಂದ್ಯದಲ್ಲಿ ಕೇವಲ 91 ಎಸೆತಗಳಲ್ಲಿ 147 ರನ್ ಸಿಡಿಸಿ ಮಿಂಚಿದ್ದರು. 

ಹೇಲ್ಸ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ಇಂಗ್ಲೆಂಡ್ ತಂಡವು ಭಾರತ ವಿರುದ್ಧ 8 ವಿಕೆಟ್’ಗಳ ಸೋಲು ಕಂಡಿತ್ತು. ಕುಲ್ದೀಪ್ ಆರು ವಿಕೆಟ್ ಕಬಳಿಸಿದರೆ, ರೋಹಿತ್ ಶರ್ಮಾ ಅಜೇಯ ಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಇದೀಗ ಎರಡನೇ ಪಂದ್ಯವು ಜುಲೈ 14ರಂದು ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದ್ದು, ಭಾರತ ಈ ಪಂದ್ಯವನ್ನೂ ಜಯಿಸಿದರೆ ಸರಣಿ ಕೈವಶ ಮಾಡಿಕೊಳ್ಳಲಿದೆ.