ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ವಿಜೇತ ಪಿ. ಕಶ್ಯಪ್ ಮತ್ತೊಮ್ಮೆ ಮುಗ್ಗರಿಸಿದ್ದಾರೆ. ಡಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪ್ರಿಕ್ವಾರ್ಟರ್ ಫೈನಲ್‌ನಲ್ಲೇ ಅವರು ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದರೆ, ಹಾಲಿ ಚಾಂಪಿಯನ್ ಅಜಯ್ ಜಯರಾಂ ಎಂಟರ ಘಟ್ಟಕ್ಕೆ ಕಾಲಿರಿಸಿದ್ದಾರೆ.

ನವದೆಹಲಿ(ಅ.14): ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ವಿಜೇತ ಪಿ. ಕಶ್ಯಪ್ ಮತ್ತೊಮ್ಮೆ ಮುಗ್ಗರಿಸಿದ್ದಾರೆ. ಡಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪ್ರಿಕ್ವಾರ್ಟರ್ ಫೈನಲ್‌ನಲ್ಲೇ ಅವರು ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದರೆ, ಹಾಲಿ ಚಾಂಪಿಯನ್ ಅಜಯ್ ಜಯರಾಂ ಎಂಟರ ಘಟ್ಟಕ್ಕೆ ಕಾಲಿರಿಸಿದ್ದಾರೆ.

ಆಕರ್ಷಕ ಪ್ರದರ್ಶನ ಮುಂದುವರೆಸಿರುವ ಜಯರಾಂ, ಗುರುವಾರ ತಡರಾತ್ರಿ ನಡೆದ ಹದಿನಾರರ ಘಟ್ಟದ ಪಂದ್ಯದಲ್ಲಿ ಹದಿನಾರನೇ ಶ್ರೇಯಾಂಕಿತ ಆಟಗಾರ ನಾರ್ವೆಯ ಮರಿಯಸ್ ಮೈರೆ ವಿರುದ್ಧ 21-6, 21-6ರ ಎರಡು ನೇರ ಗೇಮ್‌ಗಳ ಆಟದಲ್ಲಿ ಗೆಲುವು ಪಡೆದು ಮುಂದಿನ ಸುತ್ತಿಗೆ ಧಾವಿಸಿದರು. ಬ್ರೆಜಿಲ್‌ನ ಯ್ಗೊರ್ ಕೊಯ್ಲೊ ಡಿ ಒಲಿವಿರಾ ವಿರುದ್ಧ ಮುಂದಿನ ಹಂತದಲ್ಲಿ ಜಯರಾಂ ಕಾದಾಡಲಿದ್ದಾರೆ. ಆದರೆ, 11ನೇ ಶ್ರೇಯಾಂಕಿತ ಪಿ.ಕಶ್ಯಪ್ ಇಸ್ಟೋನಿಯಾದ ರಾವುಲ್ ಮಸ್ಟ್ ವಿರುದ್ಧ 18-21, 18-21ರಿಂದ ಸೋಲನುಭವಿಸಿ ತೀವ್ರ ನಿರಾಸೆ ಅನುಭವಿಸಿದರು.

ಇತ್ತ ಮಿಶ್ರ ಡಬಲ್ಸ್‌ನಲ್ಲಿ ಬಿ ಸುಮೀತ್ ರೆಡ್ಡಿ ಮತ್ತು ಮೇಘನಾ ಜಕ್ಕಂಪುಡಿ ಜೋಡಿ ಹಾಲೆಂಡ್‌ನ ಜಿಲ್ಲೆ ಮಾಸ್ ಮತ್ತು ಇಮ್ಕೆ ವಾನ್ ಡರ್ ವಿರುದ್ಧ 21-16, 21-18ರಿಂದ ಗೆಲುವು ಸಾಸಿ ಮುಂದಿನ ಸುತ್ತಿಗೆ ಧಾವಿಸಿತು.

ಸೌರಭ್ ವರ್ಮಾ ಸೆಮಿಗೆ

ತೀವ್ರತರದ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ದಿಟ್ಟ ಪ್ರದರ್ಶನ ನೀಡಿದ ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ ಸೌರಭ್ ವರ್ಮಾ ಚೈನೀಸ್ ತೈಪೆ ಗ್ರಾಂಡ್ ಪ್ರಿಕ್ಸ್ ಟೂರ್ನಿಯ ಸೆಮಿ ಫೈನಲ್‌ ತಲುಪಿದ್ದಾರೆ. ತೈಪೆ ನಗರದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಶುಕ್ರವಾರ ನಡೆದ ನಾಲ್ಕು ಗೇಮ್‌ಗಳ ಕಠಿಣಕಾರಿ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಕೆಂಟೊ ಹೊರಿಯುಚಿ ವಿರುದ್ಧ 7-11, 11-1, 11-3, 11-7 ಅಂತರದಿಂದ ಜಯಿಸಿ ಉಪಾಂತ್ಯಕ್ಕೆ ಧಾವಿಸಿದರು. ಈ ಋತುವಿನಲ್ಲಿ ಬೆಲ್ಜಿಯನ್ ಮತ್ತು ಪೋಲೆಂಡ್ ಓಪನ್‌ನಲ್ಲಿ ಫೈನಲ್‌ ತಲುಪಿದ ಸಾಧನೆ ಮೆರೆದಿರುವ ಸೌರಭ್ ಇದೀಗ ಮತ್ತೊಮ್ಮೆ ಫೈನಲ್‌ ತಲುಪಲು ಚೈನೀಸ್ ತೈಪೆಯ ಹ್ಸು ಜೆನ್ ಹಾವೊ ವಿರುದ್ಧದ ಸೆಣಸಾಟದಲ್ಲಿ ಜಯ ಸಾಸಬೇಕಿದೆ.