ಬೆಂಗಳೂರು[ಆ.17]: ಭಾರತ ಹಿರಿಯರ ತಂಡಕ್ಕೆ ಕಾಲಿಡಲು ಕಾಯುತ್ತಿರುವ ಕ್ರಿಕೆಟಿಗರ ನಡುವೆ ಶನಿವಾರದಿಂದ ಸ್ಪರ್ಧೆ ಏರ್ಪಡಲಿದೆ. 2019-20ರ ದೇಸಿ ಕ್ರಿಕೆಟ್‌ ಋುತು, ದುಲೀಪ್‌ ಟ್ರೋಫಿಯೊಂದಿಗೆ ಆರಂಭಗೊಳ್ಳಲಿದ್ದು, ಭಾರತ ಬ್ಲೂ ಹಾಗೂ ಭಾರತ ಗ್ರೀನ್‌ ತಂಡಗಳ ನಡುವಿನ ಪಂದ್ಯ ಇಲ್ಲಿನ ಹೊರವಲಯದಲ್ಲಿರುವ ಜಸ್ಟ್‌ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿದೆ.

ದುಲೀಪ್‌ ಟ್ರೋಫಿ 2019: ಮೂವರು ಕನ್ನಡಿಗರಿಗೆ ಸ್ಥಾನ

4 ದಿನಗಳ ಪಂದ್ಯ ಇದಾಗಿದ್ದು, ಭಾರತ ಬ್ಲೂ ತಂಡವನ್ನು ಶುಭ್‌ಮನ್‌ ಗಿಲ್‌ ಮುನ್ನಡೆಸಲಿದ್ದಾರೆ. ಭಾರತ ಗ್ರೀನ್‌ ತಂಡಕ್ಕೆ ಫೈಯಜ್‌ ಫಜಲ್‌ ನಾಯಕರಾಗಿದ್ದಾರೆ. ಭಾರತ ತಂಡದ ಕದ ತಟ್ಟುತ್ತಿರುವ ಋುತುರಾಜ್‌ ಗಾಯಕ್ವಾಡ್‌, ಶ್ರೇಯಸ್‌ ಗೋಪಾಲ್‌, ಬಸಿಲ್‌ ಥಂಪಿ, ಧೃವ್‌ ಶೋರೆ, ಅಂಕಿತ್‌ ರಜಪೂತ್‌, ರಾಹುಲ್‌ ಚಹಾರ್‌ ಸೇರಿದಂತೆ ಇನ್ನೂ ಅನೇಕ ಯುವ ಪ್ರತಿಭೆಗಳು ಈ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೂರ್ನಿಯಲ್ಲಿ ಆಡುವ 3ನೇ ತಂಡ ಭಾರತ ರೆಡ್‌ಗೆ ಪ್ರಿಯಾಂಕ್‌ ಪಾಂಚಾಲ್‌ ನಾಯಕರಾಗಿದ್ದಾರೆ. ಈ ತಂಡದಲ್ಲಿ ಕರ್ನಾಟಕದ ಕರುಣ್‌ ನಾಯರ್‌ ಹಾಗೂ ರೋನಿತ್‌ ಮೋರೆ ಸ್ಥಾನ ಪಡೆದಿದ್ದಾರೆ. ಇಶಾನ್‌ ಕಿಶನ್‌, ಮಹಿಪಾಲ್‌ ಲಮ್ರೊರ್‌, ಅಕ್ಷರ್‌ ಪಟೇಲ್‌, ಸಂದೀಪ್‌ ವಾರಿಯರ್‌, ಅಭಿಮನ್ಯು ಈಶ್ವರನ್‌ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಆಯ್ಕೆ ಸಮಿತಿ ವಿರುದ್ಧ ಮನೋಜ್‌ ತಿವಾರಿ ಕಿಡಿ!

ಟೂರ್ನಿಯಲ್ಲಿ ಫೈನಲ್‌ ಸೇರಿ ಒಟ್ಟು 4 ಪಂದ್ಯಗಳು ನಡೆಯಲಿವೆ. ಆ.17ರಿಂದ 20ರ ವರೆಗೂ ಭಾರತ ಬ್ಲೂ-ಗ್ರೀನ್‌, ಆ.23ರಿಂದ 26ರ ವರೆಗೂ ಭಾರತ ರೆಡ್‌-ಬ್ಲೂ, ಆ.29ರಿಂದ ಸೆ.1ರ ವರೆಗೂ ಭಾರತ ರೆಡ್‌-ಗ್ರೀನ್‌ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಸೆ.4ರಿಂದ 8ರ ವರೆಗೂ ಫೈನಲ್‌ ಪಂದ್ಯ ನಿಗದಿಯಾಗಿದೆ. 2 ಹಾಗೂ 3ನೇ ಪಂದ್ಯಕ್ಕೆ ಬೆಂಗಳೂರಿನ ಹೊರವಲಯದಲ್ಲಿರುವ ಆಲೂರು ಕ್ರಿಕೆಟ್‌ ಮೈದಾನ ಆತಿಥ್ಯ ನೀಡಲಿದೆ. ಫೈನಲ್‌ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.