ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಸಾಹ ಬದಲು ದಿನೇಶ್ ಕಾರ್ತಿಕ್ ಆಯ್ಕೆ

Dinesh Karthik Replaces Injured Wriddhiman Saha for Historic Bengaluru Test
Highlights

ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೆ ಗಾಯಗೊಂಡಿರುವ ಟೀಮ್ಇಂಡಿಯಾ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಬದಲು ದಿನೇಶ್ ಕಾರ್ತಿಕ್ ಆಯ್ಕೆಯಾಗಿದ್ದಾರೆ. ಜೂನ್ 14ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಫ್ಘಾನಿಸ್ತಾನ ನಡುವೆ ಐತಿಹಾಸಿಕ ಟೆಸ್ಟ್ ಪಂದ್ಯ ನಡೆಯಲಿದೆ.

ನವದೆಹಲಿ(ಜೂನ್.2): ಅಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಜೂನ್ 14 ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೆ ವಿಕೆಟ್ ಕೀಪರ್ ಆಗಿ ವೃದ್ಧಿಮಾನ್ ಸಾಹ ಆಯ್ಕೆಯಾಗಿದ್ದರು. ಆದರೆ ಸಾಹ ಕೈಬೆರಳಿನ ಗಾಯದಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಸಾಹ ಬದಲು ದಿನೇಶ್ ಕಾರ್ತಿಕ್ ಟೆಸ್ಟ್ ತಂಡ ಸೇರಿಕೊಳ್ಳಲಿದ್ದಾರೆ.

11ನೇ ಆವೃತ್ತಿ ಐಪಿಎಲ್ ಪಂದ್ಯದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ವೃದ್ಧಿಮಾನ್ ಸಾಹ ಕೈಬೆರಳಿಗೆ ಗಾಯಮಾಡಿಕೊಂಡಿದ್ದರು. ಆದರೆ ಸಾಹ ಸಂಪೂರ್ಣ ಫಿಟ್ ಆಗದ ಕಾರಣ ಇದೀಗ ದಿನೇಶ್ ಕಾರ್ತಿಕ್‌ಗೆ ಅವಕಾಶ ಸಿಕ್ಕಿದೆ. 2010ರಲ್ಲಿ ಬಾಂಗ್ಲಾದೇಶ ವಿರುದ್ಧ ಅಂತಿಮ ಟೆಸ್ಟ್ ಪಂದ್ಯವಾಡಿದ್ದ ದಿನೇಶ್ ಕಾರ್ತಿಕ್ ಇದೀಗ 8 ವರ್ಷದ ಬಳಿಕ ಮತ್ತೆ ಟೆಸ್ಟ್ ಕ್ರಿಕೆಟ್‌ಗೆ ಮರಳಿದ್ದಾರೆ. ಕೇವಲ 23 ಟೆಸ್ಟ್ ಪಂದ್ಯದಿಂದ 1000 ರನ್ ಸಿಡಿಸಿರುವ ಕಾರ್ತಿಕ್ , 1 ಶತಕ ಹಾಗೂ 7 ಅರ್ಧಶತಕ ಸಿಡಿಸಿದ್ದಾರೆ.  ಆದರೆ ಕಳೆದೊಂದು ವರ್ಷದಿಂದ ದೇಶಿಯ ಕ್ರಿಕೆಟ್‌ನಲ್ಲಿ ಅದ್ಬುತ ಪ್ರದರ್ಶನ ನೀಡಿರುವ ಕಾರ್ತಿಕ್ ನಿಗಧಿತ ಓವರ್ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.  ಬಾಂಗ್ಲಾದೇಶ ವಿರುದ್ಧ ನಡೆದ ನಿಧಾಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅಂತಿಮ ಓವರ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನ ಜವಾಬ್ದಾರಿ ನಿರ್ವಹಿಸಿದ ದಿನೇಶ್ ಕಾರ್ತಿಕ್, ತಂಡವನ್ನ ಪ್ಲೇ ಆಫ್ ವರೆಗೂ ಕೊಂಡೊಯ್ದಿದ್ದರು.  ಇದೀಗ ಐತಿಹಾಸಿಕ ಆಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವ ದಿನೇಶ್ ಕಾರ್ತಿಕ್ ಟೆಸ್ಟ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ತಾರಾ ಅನ್ನೋದು ಸದ್ಯದ ಕುತೂಹಲ. 

ಆಫ್ಘಾನಿಸ್ತಾನದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಿಂದ ವೃದ್ಧಿಮಾನ್ ಸಾಹ ಔಟ್

loader