ಪ್ರತಿಭಾನ್ವಿತ ಕ್ರಿಕೆಟಿಗರನ್ನು ಗುರುತಿಸಿ ರಕ್ಷಿಸುವ ಜಾಯಮಾನದ ಎಂಎಸ್ ಧೋನಿಯಿಂದಾಗಿ ಕೊಹ್ಲಿಯ ಟೆಸ್ಟ್ ಜೀವನ ನಿರಾತಂಕವಾಗಿ ಮುಂದುವರಿಯುವಂತಾಗಿದೆ.

ನವದೆಹಲಿ: ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್'ನ ಹಾಟ್ ಸ್ಟಾರ್. ಇವರ ರನ್ ದಾಹಕ್ಕೆ ಎದುರಾಳಿ ತಂಡದ ಬೌಲರ್'ಗಳು ಬೇಸ್ತುಬೀಳುತ್ತಾರೆ. ಇವರಿಲ್ಲದ ಭಾರತ ತಂಡವನ್ನು ಸದ್ಯ ಊಹಿಸಿಕೊಳ್ಳಲೂ ಅಸಾಧ್ಯ ಎಂಬಂತಹ ಸ್ಥಿತಿ ಇದೆ. ಧೋನಿ ನಿವೃತ್ತಿ ಬಳಿಕ ಟೆಸ್ಟ್ ಕ್ರಿಕೆಟ್'ನ ಸಾರಥ್ಯವೂ ಕೊಹ್ಲಿಗೆ ಸಿಕ್ಕಿದೆ. ಆದರೆ, ಇದೇ ಟೆಸ್ಟ್ ಕ್ರಿಕೆಟ್'ನಲ್ಲಿ ಕೊಹ್ಲಿ ಸರಿಯಾಗಿ ನೆಲೆ ಕಂಡುಕೊಳ್ಳಲು ಕಾರಣವಾಗಿದ್ದು ಧೋನಿಯೇ ಅಂತೆ. ಹಾಗಂತ ಹೇಳಿದವರು ವೀರೇಂದ್ರ ಸೆಹ್ವಾಗ್. ತಮ್ಮ ಟೆಸ್ಟ್ ವೃತ್ತಿಯ ಆರಂಭದಲ್ಲಿ ನಿರಂತರವಾಗಿ ಫಾರ್ಮ್ ಕಳೆದುಕೊಂಡು, ಟೀಮ್ ಇಂಡಿಯಾದಿಂದ ಗೇಟ್ ಪಾಸ್ ಪಡೆಯುವ ಅಪಾಯದಲ್ಲಿದ್ದ ಕೊಹ್ಲಿಯನ್ನು ಧೋನಿ ಉಳಿಸಿಕೊಂಡರು ಎಂದು ಹೇಳುತ್ತಾರೆ ಸೆಹ್ವಾಗ್. ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊಹಾಲಿಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಕಾಮೆಂಟರಿ ಮಾಡುವ ವೇಳೆ ವೀರೂ ಆ ವಿಷಯವನ್ನು ಬಹಿರಂಗಪಡಿಸಿದ್ದಾರೆ.

2012ರ ಪರ್ತ್ ಟೆಸ್ಟ್'ನಲ್ಲಿ ವಿರಾಟ್ ಕೊಹ್ಲಿ ಬದಲು ರೋಹಿತ್ ಶರ್ಮಾ ಅವರನ್ನು ಆಡಿಸುವುದು ತಂಡದ ಮ್ಯಾನೇಜ್ಮೆಂಟ್'ನ ನಿರ್ಧಾರವಾಗಿತ್ತು. ಆಗ ತಂಡದ ಕ್ಯಾಪ್ಟನ್ ಮತ್ತು ವೈಸ್ ಕ್ಯಾಪ್ಟನ್ ಆಗಿದ್ದವರು ಧೋನಿ ಮತ್ತು ಸೆಹ್ವಾಗ್. ಇವರಿಬ್ಬರು ಕೊಹ್ಲಿಯನ್ನೇ ಮುಂದುವರಿಸಲು ನಿರ್ಧರಿಸಿದರು. ಆ ಪಂದ್ಯದಲ್ಲಿ ಕೊಹ್ಲಿ ಅಮೂಲ್ಯ 44 ರನ್ ಗಳಿಸಿದರು. ಅಡಿಲೇಡ್'ನಲ್ಲಿ ನಡೆದ ಮುಂದಿನ ಪಂದ್ಯದಲ್ಲಿ ಕೊಹ್ಲಿ ಆಕರ್ಷಕ ಶತಕ ಭಾರಿಸಿ ಟೀಕಾಕಾರರ ಬಾಯಿ ಮುಚ್ಚಿಸಿದರು.

2011ರಲ್ಲಿ ಟೆಸ್ಟ್ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ್ದ ಕೊಹ್ಲಿ, ಆ ಪರ್ತ್ ಟೆಸ್ಟ್'ಗೆ ಮುಂಚಿನ 6 ಟೆಸ್ಟ್ ಪಂದ್ಯಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದರು. ಎರಡೇ ಎರಡು ಅರ್ಧಶತಕಗಳು ಅವರಿಂದ ಬಂದಿದ್ದವು. ಆದರೆ, ಆಗ ಭಾರತೀಯ ಕ್ರಿಕೆಟ್ ಲೋಕದಲ್ಲಿ ರೋಹಿತ್ ಶರ್ಮಾ ಮಿಂಚಿನ ಸಂಚಾರ ನಡೆಸುತ್ತಿದ್ದರು. ಪರ್ತ್ ಟೆಸ್ಟ್'ನಲ್ಲಿ ರೋಹಿತ್'ಗೆ ಕೊಹ್ಲಿ ಜಾಗ ಬಿಟ್ಟುಕೊಟ್ಟಿದ್ದರೆ, ಕಂಬ್ಯಾಕ್ ಮಾಡುವುದು ತುಸು ಕಷ್ಟವಾಗುತ್ತಿತ್ತು. ಆದರೆ, ಪ್ರತಿಭಾನ್ವಿತ ಕ್ರಿಕೆಟಿಗರನ್ನು ಗುರುತಿಸಿ ರಕ್ಷಿಸುವ ಜಾಯಮಾನದ ಎಂಎಸ್ ಧೋನಿಯಿಂದಾಗಿ ಕೊಹ್ಲಿಯ ಟೆಸ್ಟ್ ಜೀವನ ನಿರಾತಂಕವಾಗಿ ಮುಂದುವರಿಯುವಂತಾಗಿದೆ.