ಒಡೆನ್ಸ್ (ಅ.22): ಇಲ್ಲಿ ಭಾನುವಾರ ಮುಕ್ತಾಯವಾದ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್ ನಲ್ಲಿ ಭಾರತದ ಸೈನಾ ನೆಹ್ವಾಲ್ ಸೋಲುಂಡು ನಿರಾಸೆ ಅನುಭವಿಸಿದ್ದಾರೆ. ವಿಶ್ವ ನಂ.1 ಶಟ್ಲರ್ ಚೈನೀಸ್ ತೈಪೆಯ ತೈ ತ್ಸು ಯಿಂಗ್ ವಿರುದ್ಧ, ಸೈನಾ ಪರಾಭವ ಹೊಂದಿದರು. ಈ ಮೂಲಕ ಸೈನಾ ರನ್ನರ್ ಅಪ್‌ಗೆ ತೃಪ್ತಿ ಪಟ್ಟರು.

ಒಲಿಂಪಿಕ್ ಕಂಚು ವಿಜೇತೆ ಸೈನಾ, ತೈ ತ್ಸು ಯಿಂಗ್ ವಿರುದ್ಧ 13-21, 21-13, 6-21 ಗೇಮ್‌ಗಳಲ್ಲಿ ಸೋಲು ಕಂಡರು. ಪ್ರಬಲ ಪೈಪೋಟಿ ಎದುರಾದ ಪಂದ್ಯದಲ್ಲಿ 52 ನಿಮಿಷಗಳ ಆಟದಲ್ಲಿ ತೈ ತ್ಸು ಯಿಂಗ್‌ಗೆ ಸೈನಾ ಶರಣಾದರು. ಈ ಜಯದೊಂದಿಗೆ ಸೈನಾ ಅವರೊಂದಿಗಿನ ಮುಖಾಮುಖಿಯನ್ನು ತೈ ತ್ಸು ಯಿಂಗ್ 13-5ಕ್ಕೆ ಏರಿಸಿಕೊಂಡರು. 

ಈ ವರ್ಷದಲ್ಲಿ ತೈ ತ್ಸು ಯಿಂಗ್ ಎದುರು ಸೈನಾಗೆ ಇದು 5ನೇ ನೇರ ಸೋಲಾಗಿದೆ. 2016ರ ಬಳಿಕ ಚೈನೀಸ್ ತೈಪೆ ಆಟಗಾರ್ತಿ ಡೆನ್ಮಾರ್ಕ್ ಓಪನ್ ಪ್ರಶಸ್ತಿಗೆದ್ದರು. ಮೊದಲ ಗೇಮ್‌ನ ಆರಂಭದಲ್ಲಿ ತೈ ತ್ಸುಯಿಂಗ್ 6-1 ರಿಂದ ಮುನ್ನಡೆ ಸಾಧಿಸಿದರು. 

ಬಳಿಕ ಇದೇ ಅಂತರ ಕಾಯ್ದು ಕೊಂಡ ಚೈನೀಸ್ ಶಟ್ಲರ್ ಸೈನಾರನ್ನು ಹಿಂದಿಕ್ಕಿದರು. 2ನೇ ಗೇಮ್‌ನಲ್ಲಿ ಸೈನಾ, ತೈ ತ್ಸು ಯಿಂಗ್‌ನ ಎಲ್ಲ ತಂತ್ರಗಳನ್ನು ಮೀರಿ ಮುನ್ನಡೆ ಪಡೆದರು. ನಿರ್ಣಾಯಕ 3ನೇ ಗೇಮ್‌ನಲ್ಲಿ ತೈ ತ್ಸು ನಿರಂತರ ಅಂಕಗಳಿಸಿ ಸೈನಾರನ್ನು ಹಿಮ್ಮೆಟ್ಟಿಸಿದರು.