ಆನಂತರ ಸ್ಥಳೀಯ ಪ್ರತಿಭೆ ರಿಶಬ್ ಪಂತ್ (34: 20 ಎಸೆತ, 4 ಬೌಂಡರಿ, 1 ಸಿಕ್ಸರ್) ಸ್ಫೋಟಕ ಆಟ ಕೋಟ್ಲಾ ಮೈದಾನದಲ್ಲಿದ್ದ ಪ್ರೇಕ್ಷಕರನ್ನು ರಂಜಿಸಿತು.

ಡೆಲ್ಲಿ(ಮೇ.02): ಸತತ ಸೋಲಿನಿಂದ ನಲುಗಿದ್ದ ಡೆಲ್ಲಿ ಡೇರ್‌ಡೆವಿಲ್ಸ್ ಇಲ್ಲಿನ ಫಿರೋಜ್ ಶಾ ಕೋಟ್ಲಾದಲ್ಲಿ ಸನ್‌ರೈಸರ್ಸ್‌ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿತು.

 186 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ ಡೆಲ್ಲಿಗೆ ಕೋರಿ ಆ್ಯಂಡರ್‌ಸನ್ (41: 24 ಎಸೆತ, 2 ಬೌಂಡರಿ, 3 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನೆರವಾಯಿತು. ಇನ್ನಿಂಗ್ಸ್ ಆರಂಭಿಸಿದ ನಾಯಕ ಕರುಣ್ ನಾಯರ್(39: 20 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಸಂಜು ಸ್ಯಾಮ್ಸನ್ ಮೊದಲ ನಾಲ್ಕು ಓವರ್‌ಗಳಲ್ಲಿ 40 ರನ್ ಚಚ್ಚಿ ಭದ್ರ ಬುನಾದಿ ಹಾಕಿಕೊಟ್ಟರು. ಆನಂತರ ಸ್ಥಳೀಯ ಪ್ರತಿಭೆ ರಿಶಬ್ ಪಂತ್ (34: 20 ಎಸೆತ, 4 ಬೌಂಡರಿ, 1 ಸಿಕ್ಸರ್) ಸ್ಫೋಟಕ ಆಟ ಕೋಟ್ಲಾ ಮೈದಾನದಲ್ಲಿದ್ದ ಪ್ರೇಕ್ಷಕರನ್ನು ರಂಜಿಸಿತು. ಶ್ರೇಯಸ್ ಅಯ್ಯರ್ 2 ಸಿಕ್ಸರ್‌ಗಳ ನೆರವಿನಿಂದ 33 ರನ್ ಸಿಡಿಸಿ ತಂಡಕ್ಕೆ ಸಹಕಾರಿಯಾದರು. ಆದರೆ ಕೊನೆ 4 ಓವರ್‌ಗಳಲ್ಲಿ 38 ರನ್‌ಗಳ ಅವಶ್ಯಕತೆ ಇತ್ತು. ಸನ್‌ರೈಸರ್ಸ್‌ ತಂಡ ಕೊನೆ ಓವರ್‌ಗಳಲ್ಲಿ ಪ್ರಬಲ ದಾಳಿ ನಡೆಸಲು ಹೆಸರುವಾಸಿಯಾಗಿದ್ದರೂ, ಕೋರಿ ಆ್ಯಂಡರ್‌ಸನ್ ಹಾಗೂ ಕ್ರಿಸ್ ಮೋರಿಸ್ ಜೋಡಿ(15) ವಾರ್ನರ್ ಪಡೆಯ ಸವಾಲನ್ನು ಸ್ವೀಕರಿಸಿ, ಇನ್ನೂ 5 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.

25ನೇ ಅರ್ಧ ಶತಕ ಬಾರಿಸಿದ ಯುವಿ

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಸನ್‌ರೈಸರ್ಸ್‌ ಸಹ ಉತ್ತಮ ಆರಂಭ ಪಡೆದುಕೊಂಡಿತು. . ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಡೇವಿಡ್ ವಾರ್ನರ್ 30 ರನ್ ಗಳಿಸಿ ಔಟಾದರು. 28 ರನ್ ಗಳಿಸಿ ಶಿಖರ್ ಧವನ್ ಪೆವಿಲಿಯನ್‌ಗೆ ವಾಪಸ್ಸಾದ ಬಳಿಕ 9ನೇ ಓವರ್‌ನಲ್ಲಿ ಕ್ರೀಸ್‌ಗಿಳಿದ ಯುವಿ, ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ಆದರೆ ಕೊನೆ ಓವರ್‌ಗಳಲ್ಲಿ ಮೋಸೆಸ್ ಹೆನ್ರಿಕ್ಸ್‌ರಿಂದ ಬೆಂಬಲ ಪಡೆದ ಯುವರಾಜ್, ಡೆಲ್ಲಿ ಬೌಲರ್‌ಗಳ ಮೇಲೆ ಪ್ರಹಾರ ನಡೆಸಿದರು. ಅದರಲ್ಲೂ ವೇಗಿ ಕಗಿಸೊ ರಬಾಡ, ಯುವಿ(70: 41 ಎಸೆತ, 11 ಬೌಂಡರಿ, 1 ಸಿಕ್ಸರ್) ಆರ್ಭಟಕ್ಕೆ ಬಲಿಯಾದರು. ಟಿ20 ಕ್ರಿಕೆಟ್‌ನಲ್ಲಿ 25ನೇ ಅರ್ಧಶತಕ ದಾಖಲಿಸಿದ ಯುವಿ, ಇನ್ನಿಂಗ್ಸ್‌ನ ಕೊನೆ ಓವರ್‌ನಲ್ಲಿ ರಬಾಡಗೆ 4 ಬೌಂಡರಿ ಚಚ್ಚಿ ಸನ್‌ರೈಸರ್ಸ್‌ ಬೃಹತ್ ಮೊತ್ತ ಕಲೆಹಾಕಲು ನೆರವಾದರು.

ಸ್ಕೋರ್

ಸನ್ ರೈಸರ್ಸ್ ಹೈದರಾಬಾದ್: 185/3 (20/20 )

ಡಲ್ಲಿ ಡೇರ್'ಡೇವಿಲ್ಸ್: 189/4 (19.1/20)

ಪಂದ್ಯ ಶ್ರೇಷ್ಠ: ಮೊಹಮದ್ ಶೆಮಿ