ಆಸ್ಟ್ರೇಲಿಯನ್ ಓಪನ್‌ನಲ್ಲಿ ನಡಾಲ್‌ಗೆ ಸೋಲಿನ ಆಘಾತ!
ಗಾಯದ ನಡುವೆಯೂ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡಿದ್ದ ಸ್ಪೇನ್‌ನ ದಿಗ್ಗಜ ಆಟಗಾರ ರಾಫೆಲ್ ನಡಾಲ್ 2ನೇ ಸುತ್ತಿನಲ್ಲಿಯೇ ಆಘಾತಾರಿ ಸೋಲು ಕಂಡಿದ್ದಾರೆ. ಇನ್ನೊಂದೆಡೆ ಬ್ರಿಟನ್‌ನ ಯುವ ತಾರೆ ಎಮ್ಮಾ ರಾಡುಕಾನು ಕೂಡ ಸೋಲಿನೊಂದಿಗೆ ಅಭಿಯಾನ ಮುಗಿಸಿದ್ದಾರೆ.
ಮೆಲ್ಬರ್ನ್ (ಜ.19): ದಾಖಲೆಯ 23ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಸ್ಪೇನ್‌ನ ರಾಫೆಲ್ ನಡಾಲ್ ಆಸ್ಪ್ರೇಲಿಯನ್ ಓಪನ್ ಟೂರ್ನಿಯ 2ನೇ ಸುತ್ತಿನಲ್ಲೇ ಆಘಾತಕಾರಿ ಸೋಲುಂಡು ಹೊರಬಿದ್ದಿದ್ದಾರೆ. ಬ್ರಿಟನ್‌ನ ಯುವ ತಾರೆ ಎಮ್ಮಾ ರಾಡುಕಾನು ಕೂಡಾ ಸೋಲಿನೊಂದಿಗೆ ಅಭಿಯಾನ ಕೊನೆಗೊಳಿಸಿದ್ದಾರೆ. ಸೊಂಟದ ಗಾಯದಿಂದ ಬಳಲುತ್ತಿರುವ ಪುರುಷರ ಸಿಂಗಲ್ಸ್‌ನ ನಂ.1 ಶ್ರೇಯಾಂಕಿತ ನಡಾಲ್, ಬುಧವಾರ 63ನೇ ರಾರಯಂಕಿಂಗ್‌ನ ಅಮೆರಿಕದ ಮ್ಯಾಕೆನ್ಜೀ ಮೆಕ್‌ಡೊನಾಲ್ಡ್ ವಿರುದ್ಧ 4-6, 4-6, 5-7 ನೇರ ಸೆಟ್‌ಗಳಿಂದ ಪರಾಭವಗೊಂಡರು. ಟೂರ್ನಿಯ ಮೊದಲ ಸುತ್ತಿನಲ್ಲೇ ತೀವ್ರ ದಣಿವಾದಂತೆ ಕಂಡುಬಂದಿದ್ದ ನಡಾಲ್‌ಗೆ ಈ ಪಂದ್ಯದಲ್ಲಿ ಮತ್ತೆ ಗಾಯದ ಸಮಸ್ಯೆ ಎದುರಾಯಿತು. ಇದರೊಂದಿಗೆ ಸತತ 2ನೇ ಬಾರಿ ಆಸ್ಪ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿತು.
ಮಹಿಳಾ ಸಿಂಗಲ್ಸ್‌ನಲ್ಲಿ 2021ರ ಯುಎಸ್ ಓಪನ್ ಚಾಂಪಿಯನ್ 20 ವರ್ಷದ ಎಮ್ಮಾ, 2022ರ ಫ್ರೆಂಚ್ ಓಪನ್ ರನ್ನರ್-ಅಪ್ ಅಮೆರಿಕದ ಕೊಕೊ ಗಾಫ್ ವಿರುದ್ಧ 3-6, 6-7(4-7) ನೇರ ಸೆಟ್‌ಗಳಿಂದ ಸೋಲನುಭವಿಸಿದರು. ಇದೇ ವೇಳೆ ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಇಗಾ ಸ್ವಿಯಾಟೆಕ್ ಕೊಲಂಬಿಯಾದ ಕ್ಯಾಮಿಲಾ ಒಸೊರಿಯೋ ವಿರುದ್ಧ 6-2, 6-3 ಅಂತರದಲ್ಲಿ ಗೆದ್ದು 3ನೇ ಸುತ್ತಿಗೆ ಲಗ್ಗೆ ಇಟ್ಟರು. ಅಮೆರಿಕದ ಜೆಸ್ಸಿಕಾ ಪೆಗುಲಾ, ಪುರುಷರ ಸಿಂಗಲ್ಸ್‌ನಲ್ಲಿ ಡ್ಯಾನಿಲ್ ಮೆಡ್ವೆಡೆವ್ ಕೂಡಾ ಗೆಲುವು ಸಾಧಿಸಿದರು.