Davis Cup 2023: ಡೆನ್ಮಾರ್ಕ್ ಎದುರು ಸೋತ ಭಾರತ ವಿಶ್ವ ಗುಂಪು-2ಕ್ಕೆ ಹಿಂಬಡ್ತಿ
ಡೇವಿಸ್ ಕಪ್ ಟೆನಿಸ್ ಟೂರ್ನಿಯಲ್ಲಿ ಭಾರತಕ್ಕೆ ನಿರಾಸೆ
ಡೆನ್ಮಾರ್ಕ್ ಎದುರು ಸೋತ ಭಾರತ ವಿಶ್ವ ಗುಂಪು 2ಕ್ಕೆ ಹಿಂಬಡ್ತಿ
ಡೇವಿಸ್ ಕಪ್ ಟೂರ್ನಿಯಲ್ಲಿ ವಿಶ್ವ ಗುಂಪು-1ರಲ್ಲಿ ಭಾರತ ಸ್ಥಾನ ಉಳಿಸಿಕೊಳ್ಳಲು ವಿಫಲ
ಹಿಲ್ಲೆರಾಡ್(ಡಿ.05): ಡೇವಿಸ್ ಕಪ್ ಟೆನಿಸ್ ಟೂರ್ನಿಯ ವಿಶ್ವ ಗುಂಪು-1ರಲ್ಲಿ ಭಾರತ ಸ್ಥಾನ ಉಳಿಸಿಕೊಳ್ಳಲು ವಿಫಲವಾಗಿದ್ದು, ವಿಶ್ವ ಗುಂಪು-2ಕ್ಕೆ ಹಿಂಬಡ್ತಿ ಪಡೆದಿದೆ. ಶುಕ್ರವಾರ ಹಾಗೂ ಶನಿವಾರ ನಡೆದ ಡೆನ್ಮಾರ್ಕ್ ವಿರುದ್ಧದ ಪ್ಲೇ-ಆಫ್ ಪಂದ್ಯದಲ್ಲಿ ಭಾರತ 1-3 ಅಂತರದಲ್ಲಿ ಸೋಲನುಭವಿಸಿತು.
ಶುಕ್ರವಾರ ಆರಂಭಗೊಂಡ ಪ್ಲೇ-ಆಫ್ ಪಂದ್ಯದಲ್ಲಿ ಮೊದಲ ದಿನ ಬಲಿಷ್ಠ ಡೆನ್ಮಾರ್ಕ್ ವಿರುದ್ಧ ಭಾರತ 1-1ರ ಸಮಬಲ ಸಾಧಿಸಿತ್ತು. ಮೊದಲ ದಿನ 2 ಸಿಂಗಲ್ಸ್ ಪಂದ್ಯಗಳು ನಡೆದಿದ್ದು, ಮೊದಲ ಪಂದ್ಯದಲ್ಲಿ ಯೂಕಿ ಭಾಂಬ್ರಿ ವಿಶ್ವ ನಂ.9 ಹೋಲ್ಗರ್ ರ್ಯುನೆ ವಿರುದ್ಧ 2-6, 2-6 ಸೆಟ್‌ಗಳಿಂದ ಪರಾಭಗೊಂಡರು. ಅದರೆ 2ನೇ ಸಿಂಗಲ್ಸ್‌ನಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಸುಮಿತ್ ನಗಾಲ್ ಆಗಸ್ಟ್ ಹೊಲ್ಮ್‌ಗ್ರೀನ್ ವಿರುದ್ಧ 4-6, 6-3, 6-4 ಅಂತರದಲ್ಲಿ ಗೆಲುವು ಸಾಧಿಸಿ ಭಾರತಕ್ಕೆ ಆಸರೆಯಾದರು.
ಆದರೆ 2ನೇ ದಿನ ಡಬಲ್ಸ್‌ನಲ್ಲಿ ರೋಹಣ್ ಬೋಪಣ್ಣ-ಯೂಕಿ ಬಾಂಬ್ರಿ ಜೋಡಿ ಹೋಲ್ಗರ್-ಜೊಹನ್ನೆಸ್ ಜೋಡಿ ವಿರುದ್ಧ 2-6, 4-6 ಅಂತರದಲ್ಲಿ ಪರಾಭವಗೊಂಡಿತು. ಬಳಿಕ ಮೊದಲ ರಿವರ್ಸ್ ಸಿಂಗಲ್ಸ್‌ನಲ್ಲಿ ಸುಮಿತ್, ಹೋಲ್ಗರ್ ವಿರುದ್ಧ 5-7, 3-6 ನೇರ ಸೆಟ್‌ಗಳಲ್ಲಿ ಸೋಲನುಭವಿಸಿದರು.
ಖೇಲೋ ಇಂಡಿಯಾ: ಬಾಕ್ಸಿಂಗ್‌ನಲ್ಲಿ ರಾಜ್ಯಕ್ಕೆ ಚಿನ್ನ
ಭೋಪಾಲ್: 5ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಕರ್ನಾಟಕ ಶನಿವಾರ ಚಿನ್ನ ಸೇರಿದಂತೆ ಮತ್ತೆ 6 ಪದಕಗಳನ್ನು ಬಾಚಿದ್ದು, ಪದಕ ಗಳಿಕೆ 18ಕ್ಕೆ ಏರಿಕೆಯಾಗಿದೆ. ಶನಿವಾರ ರಾಜ್ಯದ ಖಾತೆಗೆ 3 ಬೆಳ್ಳಿ, 2 ಕಂಚು ಕೂಡಾ ಜಮೆಯಾಯಿತು. ಆದರೆ ಪದಕ ಪಟ್ಟಿಯಲ್ಲಿ ರಾಜ್ಯ 13ನೇ ಸ್ಥಾನಕ್ಕೆ ಕುಸಿದಿದೆ.
Ranji Trophy: ಸೆಮೀಸ್‌ನಲ್ಲಿ ಕರ್ನಾಟಕ-ಸೌರಾಷ್ಟ್ರ ಫೈಟ್
ಅಂಡರ್-18 ಬಾಲಕಿಯರ ಬಾಕ್ಸಿಂಗ್‌ನ 50 ಕೆ.ಜಿ. ವಿಭಾಗದಲ್ಲಿ ಥೊಂಗ್ರಾಮ್ ಚಾನು ಚಿನ್ನದ ಪದಕ ತಮ್ಮದಾಗಿಸಿಕೊಂಡರೆ, ಬಾಲಕರ 60 ಕೆ.ಜಿ. ವಿಭಾಗದಲ್ಲಿ ಕಿಶಾನ್ ರಾಜ್‌ಗೆ ಕಂಚಿನ ಪದಕ ದೊರೆಯಿತು. ಸೈಕ್ಲಿಂಗ್‌ನ ಬಾಲಕರ ವಿಭಾಗದ ಕೀರಿನ್ ರೇಸ್‌ನಲ್ಲಿ ಸಂಪತ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಕೂಟದಲ್ಲಿ ಸಂಪತ್‌ಗೆ ಇದು 3ನೇ ಪದಕ. ಇದೇ ವೇಳೆ ಅಥ್ಲೆಟಿಕ್ಸ್‌ನಲ್ಲಿ ರಾಜ್ಯಕ್ಕೆ 3 ಪದಕ ಲಭಿಸಿತು. ಬಾಲಕಿಯರ ವಿಭಾಗದ ಜಾವೆಲಿನ್ ಎಸೆತದಲ್ಲಿ ರಮ್ಯಶ್ರೀ ಜೈನ್ ಹಾಗೂ ಟ್ರಿಪಲ್ ಜಂಪ್‌ನಲ್ಲಿ ಭೂಮಿಕಾ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. ಬಾಲಕರ 4*100 ಮೀ. ರಿಲೇ ಓಟದಲ್ಲಿ ರಾಜ್ಯ ತಂಡಕ್ಕೆ ಕಂಚು ಲಭಿಸಿತು.
ಡೋಪಿಂಗ್: ಜಿಮ್ನಾಸ್ಟಿಕ್‌ನ ದೀಪಾಗೆ 21 ತಿಂಗಳು ನಿಷೇಧ
ನವದೆಹಲಿ: 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಮಿಂಚಿ ಎಲ್ಲರ ಗಮನ ಸೆಳೆದಿದ್ದ ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಕಾರ್‌ಗೆ 21 ತಿಂಗಳ ಕಾಲ ನಿಷೇಧ ಹೇರಲಾಗಿದೆ. 2021ರ ಅಕ್ಟೋಬರ್ ವೇಳೆಗೆ ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ಸ್ ಫೆಡರೇಶನ್(ಎಫ್‌ಐಜಿ)ನ ಡೋಪಿಂಗ್ ವಿರೋಧಿ ಚಟುವಟಿಕೆಗಳನ್ನು ನಿರ್ವಹಿಸುವ ಅಂತಾರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಐಟಿಎ) ಸಂಗ್ರಹಿಸಿದ್ದ ಕರ್ಮಾಕರ್ ಅವರ ವರದಿಯಲ್ಲಿ ಹೈಜೆನಾಮೈನ್ ಅಂಶ ಕಂಡುಬಂದಿದ್ದು, ಹೀಗಾಗಿ ಯಾವುದೇ ಕೂಟಗಳಲ್ಲಿ ಸ್ಪರ್ಧಿಸದಂತೆ ದೀಪಾಗೆ ನಿಷೇಧ ಹೇರಲಾಗಿದೆ. ಅವರ ನಿಷೇಧ ಅವಧಿ 2021ರ ಅಕ್ಟೋಬರ್‌ನಲ್ಲೇ ಆರಂಭಗೊಂಡಿದ್ದರಿಂದ ಇದೇ ವರ್ಷ ಜುಲೈ 10ಕ್ಕೆ ನಿಷೇಧದಿಂದ ಮುಕ್ತಗೊಳ್ಳಲಿದ್ದಾರೆ.