ಕಳೆದ ಜೂನ್‌ನಲ್ಲಿ ನಡೆಸಿದ್ದ ಡೋಪ್ ಟೆಸ್ಟ್ ವೇಳೆ ದವೀಂದರ್ ಗಾಂಜಾ ಸೇವಿಸಿದ್ದು ಪತ್ತೆಯಾಗಿತ್ತು. ಆದರೆ, ವಾಡಾದ ನಿಷೇಧಿತ ಮದ್ದುಗಳ ಪಟ್ಟಿಯಲ್ಲಿ ‘ಗಾಂಜಾ’ ಇರದ ಕಾರಣ, ಶಿಕ್ಷೆಯಿಂದ ಪಾರಾಗಿದ್ದರು. ಬಳಿಕ ಲಂಡನ್‌'ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌'ಶಿಪ್‌'ನಲ್ಲಿ ಸ್ಪರ್ಧಿಸಿದ್ದ ದವೀಂದರ್, ಫೈನಲ್ ಪ್ರವೇಶಿಸಿದ್ದರು. ಇದರೊಂದಿಗೆ ವಿಶ್ವಚಾಂಪಿಯನ್‌'ಶಿಪ್‌'ನ ಜಾವೆಲಿನ್ ಥ್ರೋನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಎಂಬ ದಾಖಲೆ ಬರೆದಿದ್ದರು

ನವದೆಹಲಿ(ಮಾ.01): ಭಾರತದ ಅಗ್ರ ಜಾವೆಲಿನ್ ಥ್ರೋ ಪಟು ದವೀಂದರ್ ಸಿಂಗ್ ಕಾಂಗಾ, ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದು, 4 ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗುವ ಭೀತಿಗೆ ಒಳಗಾಗಿದ್ದಾರೆ.

ಮುಂಬರುವ ಕಾಮನ್'ವೆಲ್ತ್, ಏಷ್ಯನ್ ಗೇಮ್ಸ್'ನಲ್ಲಿ ಪದಕದ ನಿರೀಕ್ಷೆಯಲ್ಲಿದ್ದ ಭಾರತೀಯ ಅಥ್ಲೀಟ್‌'ಗೆ ಭಾರೀ ಆಘಾತ ಎದುರಾಗಿದೆ. 4 ದಿನಗಳ ಹಿಂದೆ ವಿಶ್ವ ಅಥ್ಲೆಟಿಕ್ಸ್ ಸಂಸ್ಥೆಯ (ಐಎಎಎಫ್) ಉದ್ದೀಪನಾ ಮದ್ದು ತಡೆ ಘಟಕದ ಅಥ್ಲೆಟಿಕ್ಸ್ ಸಮಗ್ರತೆ ಘಟಕ (ಎಐಯು), ಪಟಿಯಾಲಕ್ಕೆ ಆಗಮಿಸಿ ದವೀಂದರ್‌'ರಿಂದ ಸಂಗ್ರಹಿಸಿದ್ದ ಮಾದರಿಯಲ್ಲಿ ನಿಷೇಧಿತ ಸ್ಟಿರಾಯ್ಡ್ ಅಂಶ ಪತ್ತೆಯಾಗಿದೆ. ಇದರೊಂದಿಗೆ 29 ವರ್ಷದ ದವೀಂದರ್ ಸಂಕಷ್ಟಕ್ಕೆ ಸಿಲುಕಿದ್ದು, ಒಂದೊಮ್ಮೆ 4 ವರ್ಷ ನಿಷೇಧಕ್ಕೆ ಗುರಿಯಾದರೆ, ಅವರ ವೃತ್ತಿಬದುಕು ಬಹುತೇಕ ಅಂತ್ಯಗೊಳ್ಳಲಿದೆ.

ಮಂಗಳವಾರ ಸಂಜೆ ಎಐಯು ಅಧಿಕಾರಿಗಳು ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆ (ಎಎಫ್‌ಐ)ಗೆ ಮಾಹಿತಿ ರವಾನಿಸಿದ್ದರು. ತಕ್ಷಣ ಪಟಿಯಾಲದಲ್ಲಿ ನಡೆಯುತ್ತಿದ್ದ ಇಂಡಿಯನ್ ಗ್ರ್ಯಾನ್ ಪ್ರೀನಲ್ಲಿ ದವೀಂದರ್‌ಗೆ ಸ್ಪರ್ಧೆಗಿಳಿಯದಂತೆ ಕ್ರಮಕೈಗೊಂಡ ಅಥ್ಲೆಟಿಕ್ಸ್ ಸಂಸ್ಥೆ, ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತು.

ಮೇಲ್ಮನವಿ ಸಲ್ಲಿಕೆ: ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ದವೀಂದರ್ ಪ್ರತಿನಿಧಿಗಳು, ‘ಫೆಡರೇಶನ್ ಜತೆ ದವೀಂದರ್ ಸೌಹಾರ್ದಯುತ ಸಂಬಂಧ ಹೊಂದಿರಲಿಲ್ಲ. ಉದ್ದೇಶಪೂರ್ವಕವಾಗಿ ಅವರು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಾವು ಮೇಲ್ಮನವಿ ಸಲ್ಲಿಸುತ್ತೇವೆ’ ಎಂದಿದ್ದಾರೆ.

ಗಾಂಜಾ ಪ್ರಕರಣದಲ್ಲಿ ಬಚಾವ್ ಆಗಿದ್ದ ದವೀಂದರ್: