‘ನಾವಿನ್ನೂ ಅಂತಿಮ ಪಟ್ಟಿಯನ್ನು ಸಲ್ಲಿಸಿಲ್ಲ. ಆದರೆ ನಿರೀಕ್ಷೆಯಂತೆ ಧೋನಿ ಹಾಗೂ ರೈನಾ ಅವರನ್ನು ಉಳಿಸಿಕೊಳ್ಳಲು ತಂಡ ನಿರ್ಧರಿಸಿದೆ. ಮೂರನೇ ಆಯ್ಕೆ ಜಡೇಜಾ ಆಗುವ ಸಾಧ್ಯತೆ ಹೆಚ್ಚು’ ಎಂದು ಚೆನ್ನೈ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.
ಚೆನ್ನೈ(ಡಿ.23): 2018ರ ಐಪಿಎಲ್ ಆವೃತ್ತಿಯ ಕುತೂಹಲ ಹೆಚ್ಚಾಗುತ್ತಿದ್ದು, ಆಟಗಾರರ ಹರಾಜಿಗೆ ತಿಂಗಳು ಮಾತ್ರ ಬಾಕಿಯಿದೆ. ತಂಡಗಳು ತಾವು ಉಳಿಸಿಕೊಳ್ಳಲು ಇಚ್ಛಿಸುವ ಆಟಗಾರರ ಪಟ್ಟಿಯನ್ನು ಜನವರಿ 4ರೊಳಗೆ ಸಲ್ಲಿಸಬೇಕಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತನ್ನ ರೀಟೈನ್ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿರುವುದಾಗಿ ತಿಳಿದುಬಂದಿದೆ.
2 ವರ್ಷಗಳ ನಿಷೇಧದ ಬಳಿಕ ಐಪಿಎಲ್’ಗೆ ವಾಪಾಸಾಗಿರುವ ಸಿಎಸ್’ಕೆ, ನಿರೀಕ್ಷೆಯಂತೆ ಧೋನಿ, ಸುರೇಶ್ ರೈನಾರನ್ನು ರೀಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ತಂಡದ ಮೂರನೇ ಆಯ್ಕೆ ರವೀಂದ್ರ ಜಡೇಜಾ ಆಗಿದ್ದು, ಆರ್. ಅಶ್ವಿನ್ ಅವರನ್ನು ಉಳಿಸಿಕೊಳ್ಳುವ ಬಗ್ಗೆ ಇನ್ನೂ ಗೊಂದಲವಿದೆ ಎನ್ನಲಾಗಿದೆ.
‘ನಾವಿನ್ನೂ ಅಂತಿಮ ಪಟ್ಟಿಯನ್ನು ಸಲ್ಲಿಸಿಲ್ಲ. ಆದರೆ ನಿರೀಕ್ಷೆಯಂತೆ ಧೋನಿ ಹಾಗೂ ರೈನಾ ಅವರನ್ನು ಉಳಿಸಿಕೊಳ್ಳಲು ತಂಡ ನಿರ್ಧರಿಸಿದೆ. ಮೂರನೇ ಆಯ್ಕೆ ಜಡೇಜಾ ಆಗುವ ಸಾಧ್ಯತೆ ಹೆಚ್ಚು’ ಎಂದು ಚೆನ್ನೈ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.
ಅಶ್ವಿನ್’ರನ್ನು ‘ರೈಟ್ ಟು ಮ್ಯಾಚ್ ಕಾರ್ಡ್’ ಬಳಸಿ ತಂಡಕ್ಕೆ ವಾಪಾಸ್ ಕರೆದುಕೊಳ್ಳುವ ಬಗ್ಗೆಯೂ ಸಿಎಸ್’ಕೆ ಇನ್ನೂ ನಿರ್ಧರಿಸಿಲ್ಲ ಎನ್ನಲಾಗಿದೆ. ಕಾರಣ, ಅಶ್ವಿನ್ ಸದ್ಯ ಕೇವಲ ಟೆಸ್ಟ್’ಗೆ ಮಾತ್ರ ಸೀಮಿತಗೊಂಡಿದ್ದಾರೆ. ಅವರು ಒಂದು ವರ್ಷದಿಂದ ಟಿ20ಯಲ್ಲಿ ಆಡಿಲ್ಲ. ಜತೆಗೆ ತಮಿಳುನಾಡಿನ ಯುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸಿಎಸ್’ಕೆ ಸೇರ್ಪಡೆಗೆ ಅಡ್ಡಿಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸುಂದರ್ ಕಳೆದ ಆವೃತ್ತಿಯಲ್ಲಿ ಪುಣೆ ತಂಡದಲ್ಲಿ ಆಡಿದ್ದರು. ಒಂದೊಮ್ಮೆ ಚೆನ್ನೈ 3 ಆಟಗಾರರನ್ನು ಉಳಿಸಿಕೊಂಡರೆ, ಹರಾಜಿನಲ್ಲಿ ‘ರೈಟ್ ಟು ಮ್ಯಾಚ್ ಕಾರ್ಡ್’ ಬಳಸಿ 2 ಆಟಗಾರರನ್ನು ಖರೀದಿಸಲು ಅವಕಾಶವಿದೆ.
