ಮಾಸ್ಕೋ(ಜು.01) : ಫಿಫಾ ವಿಶ್ವಕಪ್ ಟೂರ್ನಿ ಗೆಲ್ಲೋ ನೆಚ್ಚಿನ ತಂಡಗಳು ನಾಕೌಟ್ ಹಂತದಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರಬೀಳುತ್ತಿದೆ. ಅರ್ಜೆಂಟೀನಾ ತಂಡ ಟೂರ್ನಿಗೆ ವಿದಾಯ ಹೇಳಿದ ಬೆನ್ನಲ್ಲೇ, ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ನಾಯಕತ್ವದ ಪೋರ್ಚುಗಲ್ ತಂಡ ಕೂಡ ಫಿಫಾ ವಿಶ್ವಕಪ್ ಟೂರ್ನಿಗೆ ಗುಡ್ ಬೈ ಹೇಳಿದೆ.

ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಪೋರ್ಚುಗಲ್ ನಕೌಟ್ ಹಂತದಲ್ಲೇ ಉರುಗ್ವೆ ವಿರುದ್ಧ ಸೋಲು ಅನುಭವಿಸೋ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ಕ್ರಿಸ್ಟಿಯಾನೋ ರೊನಾಲ್ಡೋ ವಿಶ್ವಕಪ್ ಕನಸು ಭಗ್ನಗೊಂಡಿದೆ. 

ಉರುಗ್ವೆ ವಿರುದ್ಧದ ಪಂದ್ಯದಲ್ಲಿ ಪೋರ್ಚುಗಲ್ ತಂಡ 2-1 ಅಂತರದ ಸೋಲು ಕಂಡಿತ್ತು. ಫ್ರಾನ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಜೆಂಟೀನಾ ನಾಯಕ ಲಿಯೋನಲ್ ಮೆಸ್ಸಿ ಗೋಲುಗಳಿಸದೇ ತಂಡ ಸೋಲಿಗೆ ಶರಣಾಗಿತ್ತು. ಇದೀಗ ಉರುಗ್ವೆ ವಿರುದ್ಧ ಕ್ರಿಸ್ಟಿಯಾನೋ ರೋನಾಲ್ಡೋ ಕೂಡ ಗೋಲು ಗಳಿಸಲಿಲ್ಲ. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. 

ಸೋಲಿನ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ರೋನಾಲ್ಡೋ ಮುಂದಿನ ವಿಶ್ವಕಪ್ ಕುರಿತು ಈಗಲೇ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.  ಇಷ್ಟಾದರು ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ರೋನಾಲ್ಡೋ ಕಣಕ್ಕಿಳಿಯೋ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.