ಬೆಂಗಳೂರು[ಜು.30]: ’ಸುವರ್ಣನ್ಯೂಸ್ ಕನ್ನಡಪ್ರಭ’ ದಿನಪತ್ರಿಕೆ ನೀಡುವ ’ಅಸಾಮಾನ್ಯ ಕನ್ನಡಿಗ’ ಪ್ರಶಸ್ತಿಗೆ ಭಾಜನರಾಗಿದ್ದ ಮಂಡ್ಯದ ಕಾಮೇಗೌಡರ ವನ್ಯಜೀವಿಗಳ ಕಾಳಜಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೇಸಿಗೆ ಕಾಲದಲ್ಲಿ ವನ್ಯಜೀವಿಗಳ ದಾಹ ತೀರಿಸಲು ಮಂಡ್ಯದ ಕಾಮೇಗೌಡ ಬೆಟ್ಟದ ತಪ್ಪಲಿನಲ್ಲಿ ಸುಮಾರು 15 ಲಕ್ಷ ರುಪಾಯಿ ವೆಚ್ಚದಲ್ಲಿ 14 ನೀರಿನ ಹೊಂಡಗಳನ್ನು ನಿರ್ಮಿಸಿ ಸ್ವತಃ ನಿರ್ವಹಣೆ ಮಾಡುತ್ತಿದ್ದಾರೆ. ಇವರ ಪರಿಸರ ಕಾಳಜಿಯನ್ನು ಗುರುತಿಸಿ ’ಸುವರ್ಣನ್ಯೂಸ್-ಕನ್ನಡಪ್ರಭ’ ಬಳಗ ’ಅಸಾಮಾನ್ಯ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಇದೀಗ ಕುರಿಗಾಹಿ ಕಾಮೇಗೌಡರ ಕಾರ್ಯಕ್ಕೆ ವಿವಿಎಸ್ ಕೂಡ ಸಲಾಂ ಹೇಳಿದ್ದಾರೆ.

82 ವರ್ಷದ ಕಾಮೇಗೌಡ ಅವರು ಬೇಸಿಗೆ ವನ್ಯಜೀವಿಗಳ ದಾಹ ನೀಗಿಸಲು ಸುಮಾರು 15 ಲಕ್ಷ ರುಪಾಯಿ ಖರ್ಚು ಮಾಡಿ 14 ನೀರಿನ ಹೊಂಡಗಳನ್ನು ನಿರ್ಮಿಸಿದ್ದಾರೆ. ಇದು ವನ್ಯ ಜೀವಿಗಳಿಗೆ ಅನುಕೂಲವಾಗಿದೆ. ಇವರ ಈ ಕಾರ್ಯಕ್ಕೆ ಅನೇಕ ಪ್ರಶಸ್ತಿಗಳನ್ನು ಇವರನ್ನು ಹುಡುಕಿಕೊಂಡು ಬಂದಿವೆ. ಇವರ ಈ ಕಾರ್ಯಕ್ಕೆ ಪ್ರಣಾಮಗಳು ಎಂದು ಟ್ವೀಟ್ ಮಾಡಿದ್ದಾರೆ.