ಬೆಂಗಳೂರು(ಅ.28): ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾ ಸಾಧಕರನ್ನು ಗುರುತಿಸುವ ಕಾರ‍್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಕ್ರಿಕೆಟಿಗರಾದ ಕೆ.ಎಲ್‌. ರಾಹುಲ್‌, ಮಯಾಂಕ್‌ ಅಗರ್‌ವಾಲ್‌ಗೆ ಏಕಲವ್ಯ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. 

ಕಳೆದ 3 ವರ್ಷದಿಂದ ರಾಜ್ಯದ ಯಾವ ಕ್ರೀಡಾ ಸಾಧಕರಿಗೂ ಏಕಲವ್ಯ ಪ್ರಶಸ್ತಿ ನೀಡಿಲ್ಲ. ಈ ಬಾರಿ 2017, 2018, 2019ರಲ್ಲಿ ಸಾಧನೆ ಮಾಡಿದ 60 ರಿಂದ 65 ಕ್ರೀಡಾ ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಕ್ರೀಡಾ ಇಲಾಖೆ ಅಧಿಕಾರಿಯೊಬ್ಬರು ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. 

ಏಕಲವ್ಯ, ಕರ್ನಾಟಕ ಕ್ರೀಡಾರತ್ನ, ಕ್ರೀಡಾ ಪೋಷಕ ಹಾಗೂ ಜೀವಮಾನ ಶ್ರೇಷ್ಠ ಪ್ರಶಸ್ತಿಗಳನ್ನು ಕ್ರೀಡಾ ಸಾಧಕರಿಗೆ ಪ್ರದಾನ ಮಾಡಲಾಗುವುದು. ಇದೇ ನವೆಂಬರ್‌ 2ರಂದು ಕ್ರೀಡಾ ಸಾಧಕರಿಗೆ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಗೌತಮ್ ಗಂಭೀರ್ -ಮೊಹಮ್ಮದ್ ಅಜರುದ್ದೀನ್: ರಾಜಕಾರಣಕ್ಕೆ ಎಂಟ್ರಿಕೊಟ್ಟ ಕ್ರಿಕೆಟಿಗರು!

ಕೆ.ಎಲ್ ರಾಹುಲ್, ಮಯಾಂಕ್ ಅಗರ್‌ವಾಲ್ ಸದ್ಯ ಯುಎಇನಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್ ಹಾಗೂ ಟೆಸ್ಟ್ ಸರಣಿಗೂ ಈ ಇಬ್ಬರು ಆಟಗಾರರು ಆಯ್ಕೆಯಾಗಿದ್ದಾರೆ.