ನವದೆಹಲಿ(ಆ.19): ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದರೂ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದೀಗ ಗಂಭೀರ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.

ಮೂಲಗಳ ಪ್ರಕಾರ ಮುಂಬರುವ ದೆಹಲಿ ಚುನಾವಣೆಗೆ ಗೌತಮ್ ಗಂಭೀರ್ ಕಣಕ್ಕಿಳಿಸಲು ಬಿಜೆಪಿ ಸಿದ್ದತೆ ನಡೆಸಿದೆ. ಇದಕ್ಕಾಗಿ ಗಂಭೀರ್ ಮನವೊಲಿಸಲು ದೆಹಲಿ ಬಿಜೆಪಿ ಘಟಕ್ಕೆ ಜವಾಬ್ದಾರಿ  ನೀಡಲಾಗಿದೆ. ಈ ಮೂಲಕ ದೆಹಲಿ ಯುವ ಜನತೆಯನ್ನ ಬಿಜೆಪಿ ಹಿಡಿದಿಟ್ಟುಕೊಳ್ಳಲು ಸಜ್ಜಾಗಿದೆ.

2015ರಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ಸೋಲು ಅನುಭವಿಸಿತ್ತು. ಹೀಗಾಗಿ ಬಿಜೆಪಿ ಈ ಬಾರಿ ಗೆಲುವಿಗಾಗಿ ಮಾಸ್ಟರ್ ಪ್ಲಾನ್ ರೆಡಿಮಾಡಿದೆ. ಆದರೆ ಬಿಜೆಪಿ ಆಹ್ವಾನ ಹಾಗೂ ರಾಜಕೀಯ ಎಂಟ್ರಿ ಕುರಿತು ಗೌತಮ್ ಗಂಭೀರ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

2016ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಡಿದ ಬಳಿಕ ಗಂಭೀರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ. ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನ ಮುನ್ನಡೆಸಿದ ಗಂಭೀರ್, ಅರ್ಧದಲ್ಲೇ ನಾಯಕತ್ವ ತ್ಯಜಿಸಿದ್ದರು.