ಬೆಂಗಳೂರು[ಡಿ.10]: ಅಡಿಲೇಡ್ ಟೆಸ್ಟ್’ನಲ್ಲಿ ಆಸ್ಟ್ರೇಲಿಯಾವನ್ನು 31 ರನ್’ಗಳಿಂದ ರೋಚಕವಾಗಿ ಮಣಿಸುವ ಮೂಲಕ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಮಾಡಿದೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ವಿರಾಟ್ ಪಡೆ 31 ರನ್’ಗಳ ಜಯಭೇರಿ ಬಾರಿಸಿದೆ.

ಗೆಲ್ಲಲು 323 ರನ್’ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ, ಒಂದು ಹಂತದಲ್ಲಿ 187 ರನ್’ಗಳಿಗೆ 7 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಆದರೆ, ಕೆಳಕ್ರಮಾಂಕದಲ್ಲಿ 41, 31, ಮತ್ತು 32 ರನ್’ಗಳ ಜತೆಯಾಟವಾಡುವ ಮೂಲಕ ಗೆಲುವಿನ ಸಮೀಪ ಬಂದಿತ್ತು. ಅಶ್ವಿನ್ ಕೊನೆಯ ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಗೆಲುವನ್ನು ತಂದಿತ್ತರು.

ಅಡಿಲೇಡ್ ಟೆಸ್ಟ್’ನಲ್ಲಿ ಕಾಂಗರೂಗಳ ಬೇಟೆಯಾಡಿದ ಟೀಂ ಇಂಡಿಯಾ

ಅಡಿಲೇಡ್ ಟೆಸ್ಟ್’ನಲ್ಲಿ ನಿರ್ಮಾಣವಾದ ದಾಖಲೆಗಳ ಪಟ್ಟಿ ಇಲ್ಲಿದೆ ನೋಡಿ...

1. ಭಾರತ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯ ಮೊದಲ ಪಂದ್ಯ ಗೆದ್ದ ಸಾಧನೆ ಮಾಡಿದೆ. ಕಳೆದ 11 ಟೆಸ್ಟ್ ಸರಣಿಗಳಲ್ಲಿ ಭಾರತ ತಂಡವು ಮೊದಲ ಪಂದ್ಯದಲ್ಲಿ 9 ಬಾರಿ ಸೋಲಿನ ಕಹಿಯುಂಡಿದ್ದರೆ, 2 ಬಾರಿ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು.

2. ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಎದುರು ಟೆಸ್ಟ್ ಪಂದ್ಯವನ್ನು ಗೆದ್ದ ಭಾರತದ ಮೊದಲ ಪ್ರವಾಸಿ ತಂಡದ ನಾಯಕ ಎನ್ನುವ ಕೀರ್ತಿಗೆ ವಿರಾಟ್ ಕೊಹ್ಲಿ ಪಾತ್ರವಾಗಿದ್ದಾರೆ. 

3. ವಿರಾಟ್ ಕೊಹ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ತಂಡವನ್ನು ಗೆಲ್ಲಿಸಿದ ಭಾರತದ ಮೊದಲ ಹಾಗೂ ವಿಶ್ವದ 6ನೇ ನಾಯಕ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಈ ಮೊದಲು ಜೋ ಡಾರ್ಲಿಂಗ್[1902], ಕೆಪ್ಲಾರ್ ವೆಸ್ಸೆಲ್ಸ್[1994], ಮಾರ್ಕ್ ಟೇಲರ್[1997], ಗ್ರೇಮ್ ಸ್ಮಿತ್[2008&2012] ಹಾಗೂ ರಿಕಿ ಪಾಂಟಿಂಗ್[2009] ಕ್ಯಾಲೆಂಡರ್ ವರ್ಷವೊಂದರಲ್ಲೇ 3 ವಿದೇಶಿ ನೆಲದಲ್ಲಿ ಪಂದ್ಯ ಗೆದ್ದ ಸಾಧನೆ ಮಾಡಿದ್ದಾರೆ.

ಅಡಿಲೇಡ್ ದಿಗ್ವಿಜಯ: ಟ್ವಿಟರಿಗರ ಹೃದಯ ಗೆದ್ದ ಮೊದಲ ಟೆಸ್ಟ್

4. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ ಟಾಸ್ ಗೆದ್ದ ಪಂದ್ಯದಲ್ಲಿ ಒಮ್ಮೆಯೂ ಟೀಂ ಇಂಡಿಯಾ ಸೋತಿಲ್ಲ. ಇದುವರೆಗೂ ಕೊಹ್ಲಿ ಒಟ್ಟು 20 ಟೆಸ್ಟ್ ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದು, 17 ಪಂದ್ಯಗಳಲ್ಲಿ ಜಯ ಹಾಗೂ 3 ಪಂದ್ಯಗಳು ಡ್ರಾ ಆಗಿವೆ. 

5. ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ 11 ಕ್ಯಾಚ್ ಹಿಡಿಯುವ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ ಗರಿಷ್ಠ ಕ್ಯಾಚ್ ಹಿಡಿದವರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. 

ವಿಶ್ವದಾಖಲೆ ನಿರ್ಮಿಸಿ ದಿಗ್ಗಜರ ಸಾಲಿಗೆ ಸೇರಿದ ರಿಷಭ್ ಪಂತ್

6. ಆಸ್ಟ್ರೇಲಿಯಾ ದ್ವಿತಿಯ ಇನ್ನಿಂಗ್ಸ್’ನಲ್ಲಿ 291 ರನ್ ಕಲೆಹಾಕಿದರೂ ಒಂದೂ ಅರ್ಧಶತಕದ ಜತೆಯಾಟ ಮೂಡಿಬರಲಿಲ್ಲ. 6 ಹಾಗೂ 8ನೇ ಕ್ರಮಾಂಕದಲ್ಲಿ ಆಸಿಸ್ 41 ರನ್’ಗಳ ಜತೆಯಾಟ ಮೂಡಿಬಂತು.

7. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಕ್ಯಾಚ್’ಗಳ ಮೂಲಕ ವಿಕೆಟ್ ಪತನವಾಗಿದ್ದೂ ಕೂಡಾ ಇದೇ ಪಂದ್ಯದಲ್ಲಿ. ಈ ಪಂದ್ಯದಲ್ಲಿ ಒಟ್ಟು 35 ಕ್ಯಾಚ್’ಗಳು ಹಿಡಿಯಲ್ಪಟ್ಟಿವೆ. ಈ ಮೊದಲು 2018ರಲ್ಲೇ ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ 34 ಕ್ಯಾಚ್’ಗಳು ಹಿಡಿಯಲ್ಪಟ್ಟಿದ್ದವು.