ಕ್ರಿಕೆಟ್ ಸೀಕ್ರೇಟ್ಸ್: ಟೀಂ ಇಂಡಿಯಾ ಪಾಲಿಗಿಂದು ಒಳಿತು ಕೆಡುಕಿನ ದಿನ

First Published 23, Jun 2018, 5:27 PM IST
Cricket Socrates June 23 Most Important Day for Cricket Team India
Highlights

ಅದು ಜೂನ್ 23, 2013- ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆದ ದಿನ: ಇಂಗ್ಲೆಂಡ್ ಹಾಗೂ ವೇಲ್ಸ್ ಜಂಟಿಯಾಗಿ ಆತಿಥ್ಯ ವಹಿಸಿದ್ದ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಬೆಂಗಳೂರು[ಜೂ.23]: ಸುವರ್ಣ ನ್ಯೂಸ್ ವೆಬ್’ಸೈಟ್ ’ಕ್ರಿಕೆಟ್ ಸೀಕ್ರೇಟ್ಸ್’ ಹೆಸರಿನಲ್ಲಿ ಕ್ರಿಕೆಟ್’ಗೆ ಸಂಬಂಧಿಸಿದ ರೋಚಕ ಹಾಗೂ ಕುತೂಹಲಕಾರಿ ವಿಚಾರಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಆರಂಭಿಸಿದೆ. ಕ್ರಿಕೆಟ್ ಬಗೆಗಿನ ಸ್ವಾರಸ್ಯಕರ ಮತ್ತು ಇತಿಹಾಸದ ಘಟನೆಗಳನ್ನು ’ಸುವರ್ಣ ನ್ಯೂಸ್ ವೆಬ್ ಬಳಗ’ ಪ್ರತಿದಿನ ನಿಮ್ಮ ಮುಂದೆ ಮೆಲುಕು ಹಾಕಲಿದೆ...
ಟೀಂ ಇಂಡಿಯಾ ಪಾಲಿಗೆ ಜೂನ್ 23 ಎಂದೆಂದೂ ಮರೆಯಲಾರದ ದಿನ. ಒಳಿತು ಹಾಗೂ ಕೆಡುಕು ಎರಡು ಫಲಿತಾಂಶ ಸಿಕ್ಕಿದ್ದು ಇದೇ ದಿನ. ಏನು ಆ ಒಳಿತು ಹಾಗೂ ಕೆಡುಕು ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...
ಒಳಿತು ಮೊದಲಿರಲಿ, ಕೆಡುಕು ಆಮೇಲೆ..

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆದ ದಿನ- [ಜೂನ್ 23, 2013]

ಇಂಗ್ಲೆಂಡ್ ಹಾಗೂ ವೇಲ್ಸ್ ಜಂಟಿಯಾಗಿ ಆತಿಥ್ಯ ವಹಿಸಿದ್ದ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಎಡ್’ಬಾಸ್ಟನ್’ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 5 ರನ್’ಗಳಿಂದ ರೋಚಕವಾಗಿ ಮಣಿಸಿ ಟೀಂ ಇಂಡಿಯಾ ಎರಡನೇ ಬಾರಿಗೆ ಐಸಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಮೂಲಕ ಎಂ.ಎಸ್ ಧೋನಿ (ಟಿ20 ವಿಶ್ವಕಪ್[2007], ಏಕದಿನ ವಿಶ್ವಕಪ್[2011] ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ[2013]) ಐಸಿಸಿಯ ಮೂರು ಟ್ರೋಫಿ ಗೆದ್ದುಕೊಟ್ಟ ಮೊದಲ ನಾಯಕ ಎನ್ನುವ ಕೀರ್ತಿಗೆ ಭಾಜನರಾಗಿದ್ದರು.

2. ಭಾರತಕ್ಕೆ ’ಹಿಟ್’ಮ್ಯಾನ್’ ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ದಿನ:
ಟೀಂ ಇಂಡಿಯಾ ಉಪನಾಯಕ, ಹಿಟ್’ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ [ಜೂನ್ 23, 2007] ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ದಿನವಿದು. ಆರಂಭಿಕ ಸ್ಫೋಟಕ ಬ್ಯಾಟ್ಸ್’ಮನ್ ಆಗಿ ಗುರುತಿಸಿಕೊಂಡಿರುವ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್’ನಲ್ಲಿ ಗರಿಷ್ಠ ವೈಯುಕ್ತಿಕ ಮೊತ್ತ 264 ರನ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ಏಕದಿನ ಕ್ರಿಕೆಟ್’ನಲ್ಲಿ ಮೂರು ದ್ವಿಶತಕ ಸಿಡಿಸಿದ ಏಕೈಕ ಬ್ಯಾಟ್ಸ್’ಮನ್ ಎನ್ನುವ ದಾಖಲೆ ಕೂಡಾ ರೋಹಿತ್ ಹೆಸರಿನಲ್ಲಿದೆ.

ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಕ್ಷಣವನ್ನು ರೋಹಿತ್ ಶರ್ಮಾ ಸ್ಮರಿಸಿಕೊಂಡಿದ್ದು ಹೀಗೆ..

1996ರ ವಿಶ್ವಕಪ್  ಟೀಂ ಇಂಡಿಯಾ ಪಾಲಿಗೆ ಕರಾಳ ದಿನ:
1996ರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್’ನಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಕೋಲ್ಕತಾದ ಈಡನ್’ಗಾರ್ಡನ್ ಮೈದಾನದಲ್ಲಿ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 251 ರನ್ ಕಲೆಹಾಕಿತ್ತು. ಲಂಕಾ ನೀಡಿದ ಗುರಿ ಬೆನ್ನತ್ತಿದ್ದ ಭಾರತ 98 ರನ್’ಗಳಗೆ ಎರಡು ವಿಕೆಟ್ ಕಳೆದುಕೊಂಡು ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿತ್ತು. ಸಚಿನ್ ತೆಂಡುಲ್ಕರ್ ವಿಕೆಟ್ ಬೀಳುತ್ತಿದ್ದಂತೆ ನಾಟಕೀಯ ಕುಸಿತ ಕಂಡ ಭಾರತ ತನ್ನ ಖಾತೆಗೆ 22 ರನ್’ಗಳನ್ನು ಸೇರಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿತ್ತು. ಟೀಂ ಇಂಡಿಯಾ ಕ್ರಿಕೆಟಿಗ ಬೇಜವಾಬ್ದಾರಿಯುತ ಬ್ಯಾಟಿಂಗ್ ಬಗ್ಗೆ ಬೇಸತ್ತ ಭಾರತೀಯ ಅಭಿಮಾನಿಗಳು ಮೈದಾನಗಳತ್ತ ಪ್ಲಾಸ್ಟಿಕ್ ಬಾಟಲ್’ಗಳನ್ನು ಎಸೆದರು. ವೀಕ್ಷಕರ ಗ್ಯಾಲರಿಯಲ್ಲೇ ಬೆಂಕಿಹಚ್ಚಿ ದಾಂಧಲೆ ನಡೆಸಿದರು. ಆಟ ಮುಂದುವರೆಯುವುದು ಅಸಾಧ್ಯವೆಂದು ತಿಳಿದ ಮ್ಯಾಚ್ ರೆಫ್ರಿ ಕ್ಲೈವ್ ಲಾಯ್ಡ್ ಮಧ್ಯಪ್ರವೇಶಿಸಿ ಶ್ರೀಲಂಕಾ ತಂಡ ವಿಜೇತ ತಂಡವೆಂದು ಘೋಷಿಸಿದರು. 

ಪ್ರೇಕ್ಷಕರ ಅನುಚಿತ ವರ್ತನೆಯಿಂದ ಪಂದ್ಯ ರದ್ದಾಗಿದ್ದು ಇತಿಹಾಸದಲ್ಲಿ ಅದೇ ಮೊದಲಾಗಿದ್ದು ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಎಂದೆಂದು ಅಳಿಸಲಾಗದ ಕಪ್ಪುಚುಕ್ಕೆಯಾಗಿ ಉಳಿದಿದೆ.
ಇನ್ನು ಈ ಪಂದ್ಯದ ಕುರಿತಂತೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೂಡಾ ಕೇಳಿ ಬಂದಿತ್ತು.   

loader