ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಜುಲೈ 23 ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.

ಬೆಂಗಳೂರು(ಜು.23): ಟೀಂ ಇಂಡಿಯಾ ಯುವ ಸ್ಪಿನ್ನರ್ ಯಜುವೇಂದ್ರ ಚೆಹಾಲ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 28ನೇ ವಯಸ್ಸಿಗೆ ಕಾಲಿಟ್ಟ ಯಜುವೇಂದ್ರ ಚೆಹಾಲ್, ಸದ್ಯ ಭಾರತ ನಿಗಧಿತ ತಂಡದ ಖಾಯಂ ಸದಸ್ಯನಾಗಿ ಸ್ಥಾನ ಪಡೆದಿದ್ದಾರೆ.

ಹರಿಯಾಣ ಮೂಲದ ಯಜುವೇಂದ್ರ ಚೆಹಾಲ್ ಜನಪ್ರೀಯವಾಗಿದ್ದು ಐಪಿಎಲ್ ಟೂರ್ನಿಯಲ್ಲಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮಿಂಚಿನ ಪ್ರದರ್ಶನ ನೀಡಿದ ಚಹಾಲ್, ಟೀಂ ಇಂಡಿಯಾಗೂ ಪದಾರ್ಪಣೆ ಮಾಡಿದರು.

2016ರಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಚೆಹಾಲ್, 26 ಏಕದಿನ ಪಂದ್ಯದಿಂದ 45 ವಿಕೆಟ್ ಹಾಗೂ 26 ಟಿ20 ಪಂದ್ಯದಿಂದ 43 ವಿಕೆಟ್ ಕಬಳಿಸಿದ್ದಾರೆ. ಇತ್ತೀಚೆಗಿನ ಇಂಗ್ಲೆಂಡ್ ಪ್ರವಾಸದ ಟಿ20 ಟೂರ್ನಿಯಲ್ಲಿ ಚೆಹಾಲ್ ಉತ್ತಮ ಪ್ರದರ್ಶನ ನೀಡಿ ಗಮನಸೆಳೆದಿದ್ದರು. ಇದೀಗ 28ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಚೆಹಾಲ್‌ಗೆ ಹುಟ್ಟುಹಬ್ಬದ ಶುಭಾಶಯಗಳು.

ಮಹಿಳಾ ವಿಶ್ವಕಪ್ ಫೈನಲ್ 2017: ಜುಲೈ 23, 2017ರಂದು ಇಂಗ್ಲೆಂಡ್‌ನಲ್ಲಿ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನ ಎದುರಿಸಿತ್ತು. ರೋಚಕ ಹೋರಾಟದಲ್ಲಿ ಇಂಗ್ಲೆಂಡ್ ನೀಡಿದ 229 ರನ್ ಗುರಿ ಬೆನ್ನಟ್ಟಿದ ಭಾರತ 219ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಫೈನಲ್‌ನಲ್ಲಿ ಮುಗ್ಗರಿಸಿ ರನ್ನರ್ ಅಪ್ ಪ್ರಶಸ್ತಿ ಪಡದುಕೊಂಡಿತು.

ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತರೂ, ಟೀಂ ಇಂಡಿಯಾ ಮಹಿಳಾ ತಂಡದ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಭಾರತದ ವಿಶ್ವಕಪ್ ಹೋರಾಟದಲ್ಲಿ ಕರ್ನಾಟಕದ ವೇದಾ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್ ಪ್ರಮುಖ ಪಾತ್ರ ನಿರ್ವಹಿಸಿದ್ದರು.