ಕ್ರಿಕೆಟ್ ಸೀಕ್ರೆಟ್ಸ್: ಈ ದಿನದ ವಿಶೇಷವೇನು ಗೊತ್ತಾ?

cricket secret: flashback
Highlights

ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಹೀಗೆ ಕ್ರಿಕೆಟ್ ಇತಿಹಾಸದಲ್ಲಿನ ರೋಚಕ ಕ್ಷಣಗಳ ಮೆಲುಕು ಹಾಕಿದ್ದರೆ ಜೂನ್.1 ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ.

ಬೆಂಗಳೂರು(ಜೂನ್.1)  ಹೌದು, ಇದೇ ದಿನ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.  ಜೂನ್ 1, 2008ರಲ್ಲಿ ಮೊದಲನೇ ಆವೃತ್ತಿ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ನಡೆದಿತ್ತು. ಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಹೋರಾಟ ನಡೆಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ನಷ್ಟಕ್ಕೆ 163 ರನ್ ಪೇರಿಸಿತು. ಈ ಗುರಿಯನ್ನ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ನಿಗಧಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು. ಈ ಮೂಲಕ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಶೇನ್ ವಾರ್ನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತು. 

ಜೂನ್ 1 ರ ವಿಶೇಷತೆ ಇಲ್ಲಿಗೆ ಮುಗಿದಿಲ್ಲ. ಇದೇ ದಿನ ಅಂದರೆ ಜೂನ್ 1, 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 2ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ದಾಖಲೆ ಬರೆಯಿತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್, ವೃದ್ಧಿಮಾನ್ ಸಾಹ ಶತಕದ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 199 ರನ್ ಸಿಡಿಸಿತು. 200 ರನ್ ಗುರಿ ಪಡೆದ ಕೋಲ್ಕತ್ತಾಗೆ ಕನ್ನಡಿಗ ಮನೀಶ್ ಪಾಂಡೆ ಆಸರೆಯಾದರು. ಪಾಂಡೆ 94 ರನ್ ಸಿಡಿಸೋ ಮೂಲಕ ಕೋಲ್ಕತ್ತಾ 2ನೇ ಬಾರಿಗೆ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಇದೇ ದಿನ ಟೀಮ್ಇಂಡಿಯಾ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್‌ಗೆ ಹುಟ್ಟು ಹಬ್ಬದ ಸಂಭ್ರಮ. ಜೂನ್.1, 1985 ರಲ್ಲಿ ಚೆನ್ನೈನಲ್ಲಿ ಹುಟ್ಟಿದ ದಿನೇಶ್ ಕಾರ್ತಿಕ್ ಇಂದು 33ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ದಿನೇಶ್ ಕಾರ್ತಿಕ್ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಇದುವರೆಗೆ 23 ಟೆಸ್ಟ್ ಪಂದ್ಯದಿಂದ 1000 ರನ್ ಸಿಡಿಸಿರುವ ಕಾರ್ತಿಕ್, 1 ಶತಕಕ  ಹಾಗೂ 7 ಅರ್ಧಶತಕ ದಾಖಲಿಸಿದ್ದಾರೆ. ಇನ್ನು 79 ಏಕದಿನ ಪಂದ್ಯಗಳಲ್ಲಿ 1496 ರನ್ ಸಿಡಿಸಿರುವ ಕಾರ್ತಿಕ್ ಬ್ಯಾಟಿಂಗ್‌ನಲ್ಲಿ 9 ಅರ್ಧಶತಕಗಳು ದಾಖಲಾಗಿವೆ. 33ನೇ ವಸಂತಕ್ಕೆ ಕಾಲಿಟ್ಟಿರುವ ದಿನೇಶ್ ಕಾರ್ತಿಕ್‌ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
 


 

loader