ಪರ್ತ್[ಡಿ.14]: ಆಸ್ಟ್ರೇಲಿಯಾದ ಶತಕದ ಜೊತೆಯಾಟಕ್ಕೆ ಬ್ರೇಕ್ ಹಾಕುವಲ್ಲಿ ಜಸ್ಪ್ರೀತ್ ಬುಮ್ರಾ ಯಶಸ್ವಿಯಾಗಿದ್ದಾರೆ. ಆ್ಯರೋನ್ ಫಿಂಚ್ ಬಲಿ ಪಡೆಯುವ ಮೂಲಕ ಬುಮ್ರಾ, ಆಸ್ಟ್ರೇಲಿಯಾಗೆ ಮೊದಲ ಶಾಕ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಉತ್ತಮ ಆರಂಭವನ್ನೇ ಪಡೆಯಿತು. ಆ್ಯರೋನ್ ಫಿಂಚ್-ಮಾರ್ಕಸ್ ಹ್ಯಾರಿಸ್ ಜೋಡಿ ಆತ್ಮವಿಶ್ವಾಸದಿಂದಲೇ ಭಾರತೀಯ ಬೌಲರ್’ಗಳನ್ನು ಎದುರಿಸಿತು. ನಾಲ್ವರು ವೇಗದ ಬೌಲರ್’ಗಳೊಂದಿಗೆ ಕಣಕ್ಕಿಳಿದ ಭಾರತ ವಿಕೆಟ್ ಪಡೆಯಲು ಸಾಕಷ್ಟು ಪ್ರಯತ್ನಿಸಿತು. ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಆಸಿಸ್ ಆರಂಭಿಕ ಜೋಡಿ ಸಿಕ್ಕ ಅವಕಾಶದಲ್ಲೆಲ್ಲ ಬೌಂಡರಿ ಬಾರಿಸುತ್ತಾ ರನ್ ಕಲೆಹಾಕುತ್ತಾ ಸಾಗಿತು. ಇದೇ ವೇಳೆ 90 ಎಸೆತಗಳನ್ನು ಎದುರಿಸಿದ ಹ್ಯಾರಿಸ್ ಚೊಚ್ಚಲ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಇನ್ನು ಮೊದಲ ಟೆಸ್ಟ್’ನಲ್ಲಿ ರನ್ ಗಳಿಸಲು ಪರದಾಡಿದ್ದ ಫಿಂಚ್ ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸುವ ಮೂಲಕ ಬೌಲರ್’ಗಳನ್ನು ಕಾಡಿದರು. 103 ಎಸೆತಗಳನ್ನು ಎದುರಿಸಿದ ಫಿಂಚ್ ತಮ್ಮ ಟೆಸ್ಟ್ ವೃತ್ತಿಜೀವನದ 2ನೇ ಅರ್ಧಶತಕ ಸಿಡಿಸಿದರು. ಇದರ ಬೆನ್ನಲ್ಲೇ ಬುಮ್ರಾ ಬೌಲಿಂಗ್’ನಲ್ಲಿ ಎಲ್’ಬಿ ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು.

ಇದೀಗ ಆಸ್ಟ್ರೇಲಿಯಾ 39 ಓವರ್ ಮುಕ್ತಾಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 114 ರನ್ ಬಾರಿಸಿದ್ದು, ಹ್ಯಾರಿಸ್ 56 ಹಾಗೂ ಉಸ್ಮಾನ್ ಖ್ವಾಜಾ 1 ರನ್ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಆಸ್ಟ್ರೇಲಿಯಾ ಕೇವಲ 6 ಬಾರಿ ಮಾತ್ರ ತವರಿನಲ್ಲಿ ಮೊದಲ ವಿಕೆಟ್’ಗೆ ಶತಕದ ಜತೆಯಾಟವಾಡಿಯೂ ಸೋತಿದೆ. ಇನ್ನು 1996ರ ಬಳಿಕ ಒಮ್ಮೆ ಮಾತ್ರ ಸೋಲು ಕಂಡಿದೆ.