ಪರ್ತ್[ಡಿ.14]: ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್’ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿದ್ದು ಉತ್ತಮ ಆರಂಭ ಪಡೆದಿದೆ. ಪರ್ತ್ ಪಿಚ್’ನಲ್ಲಿ ಭಾರತ ಪರಿಣಿತ ಸ್ಪಿನ್ನರ್’ಗಳಿಲ್ಲದೇ ಕಣಕ್ಕಿಳಿದಿದೆ.

ಮೇಲ್ನೋಟಕ್ಕೆ ವೇಗದ ಪಿಚ್’ನಂತೆ ಕಾಣುವ ಪರ್ತ್ ಮೈದಾನದಲ್ಲಿ ಭಾರತ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿದೆ. ರೋಹಿತ್ ಶರ್ಮಾ ಹಾಗೂ ಅಶ್ವಿನ್ ಬದಲಿಗೆ ಹನುಮ ವಿಹಾರಿ ಮತ್ತು ಉಮೇಶ್ ಯಾದವ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪರ್ತ್ ಟೆಸ್ಟ್’ನಲ್ಲಿ ಅಶ್ವಿನ್ ಬದಲಿಗೆ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾಗೆ ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಭಾರತ ತಜ್ಞ ಸ್ಪಿನ್ನರ್’ಗಳಿಲ್ಲದೇ ಕಣಕ್ಕಿಳಿಯುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಆಸ್ಟ್ರೇಲಿಯಾ ಎದುರು 1992ರಲ್ಲಿ ಸಿಡ್ನಿ ಟೆಸ್ಟ್’ನಲ್ಲಿ, 2012ರ ಪರ್ತ್ ಟೆಸ್ಟ್’ನಲ್ಲಿ ಹಾಗೂ ಇದೇ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಜೋಹಾನ್ಸ್’ಬರ್ಗ್ ಟೆಸ್ಟ್’ನಲ್ಲಿ ಭಾರತ ಪರಿಣಿತ ಸ್ಪಿನ್ನರ್’ಗಳಿಲ್ಲದೇ ಕಣಕ್ಕಿಳಿದಿತ್ತು.

ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದೀಗ ಆಸ್ಟ್ರೇಲಿಯಾ 10 ಓವರ್ ಮುಕ್ತಾಯದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 37 ರನ್ ಬಾರಿಸಿದ್ದು, ಫಿಂಚ್ 20 ಹಾಗೂ ಹ್ಯಾರಿಸ್ 16 ರನ್ ಬಾರಿಸಿದ್ದಾರೆ.