ಅಪಾಯದಲ್ಲಿದೆ ಟೀಂ ಇಂಡಿಯಾ ಕ್ರಿಕೆಟ್ ನಂ.1 ಸ್ಥಾನ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Dec 2018, 12:40 PM IST
Cricket India No 1 Test Ranking on Line in Series Against Australia
Highlights

4 ಪಂದ್ಯಗಳ ಸರಣಿಯಲ್ಲಿ ಭಾರತ ಗೆಲ್ಲದಿದ್ದರೂ, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡರೂ ಸಾಕು. ಅಗ್ರಸ್ಥಾನ ಭಾರತದ ಕೈತಪ್ಪುವುದಿಲ್ಲ. ಒಂದೊಮ್ಮೆ ಆಸ್ಪ್ರೇಲಿಯಾ 4-0 ಅಂತರದಲ್ಲಿ ಸರಣಿ ಗೆದ್ದರೆ ನಂ.1 ಪಟ್ಟ ಅದರ ಪಾಲಾಗಲಿದೆ. ಭಾರತ 3ನೇ ಸ್ಥಾನಕ್ಕೆ ಕುಸಿಯಲಿದೆ.

ದುಬೈ(ಡಿ.04): ಬಹು ನಿರೀಕ್ಷಿತ ಭಾರತ-ಆಸ್ಪ್ರೇಲಿಯಾ ನಡುವಿನ ಟೆಸ್ಟ್‌ ಸರಣಿ ಆರಂಭಕ್ಕೆ ಇನ್ನು ಕೇವಲ ಎರಡೇ ದಿನ ಬಾಕಿ ಇದೆ. ಡಿ.6ರಂದು ಅಡಿಲೇಡ್‌ನಲ್ಲಿ ಮೊದಲ ಟೆಸ್ಟ್‌ ಆರಂಭಗೊಳ್ಳಲಿದ್ದು, 4 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ಶುಭಾರಂಭ ಮಾಡುವ ಗುರಿ ಹೊಂದಿವೆ. ಭಾರತದ ಪಾಲಿಗೆ ಈ ಸರಣಿ ಅತ್ಯಂತ ಮಹತ್ವದಾಗಿದೆ. ಒಂದೊಮ್ಮೆ ಆಸ್ಪ್ರೇಲಿಯಾ ವಿರುದ್ಧ 0-4ರಲ್ಲಿ ವೈಟ್‌ವಾಶ್‌ ಮುಖಭಂಗಕ್ಕೆ ಒಳಗಾದರೆ, ಭಾರತ ಐಸಿಸಿ ಟೆಸ್ಟ್‌ ತಂಡಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನದಿಂದ ಕೆಳಗಿಳಿಯಲಿದೆ.

4 ಪಂದ್ಯಗಳ ಸರಣಿಯಲ್ಲಿ ಭಾರತ ಗೆಲ್ಲದಿದ್ದರೂ, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡರೂ ಸಾಕು. ಅಗ್ರಸ್ಥಾನ ಭಾರತದ ಕೈತಪ್ಪುವುದಿಲ್ಲ. ಒಂದೊಮ್ಮೆ ಆಸ್ಪ್ರೇಲಿಯಾ 4-0 ಅಂತರದಲ್ಲಿ ಸರಣಿ ಗೆದ್ದರೆ ನಂ.1 ಪಟ್ಟ ಅದರ ಪಾಲಾಗಲಿದೆ. ಭಾರತ 3ನೇ ಸ್ಥಾನಕ್ಕೆ ಕುಸಿಯಲಿದೆ.

ಭಾರತ ಸದ್ಯ 116 ರೇಟಿಂಗ್‌ ಅಂಕಗಳನ್ನು ಹೊಂದಿದೆ. ಆಸ್ಪ್ರೇಲಿಯಾ 102 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಉಭಯ ತಂಡಗಳ ನಡುವೆ 14 ಅಂಕಗಳ ಅಂತರವಿದ್ದು, ಭಾರತಕ್ಕೆ ಆಸ್ಪ್ರೇಲಿಯಾ ನೆಲದಲ್ಲಿ ಸರಣಿ ಗೆಲ್ಲಲು ಇದು ಅತ್ಯುತ್ತಮ ಅವಕಾಶವಾಗಿದೆ.

ಭಾರತ 4-0 ಅಂತರದಲ್ಲಿ ಸರಣಿ ಗೆದ್ದರೆ, ರೇಟಿಂಗ್‌ ಅಂಕ 120ಕ್ಕೆ ಏರಿಕೆಯಾಗಲಿದೆ. ಆಸ್ಪ್ರೇಲಿಯಾದ ರೇಟಿಂಗ್‌ ಅಂಕ 97ಕ್ಕಿಳಿಯಲಿದೆ. ಒಂದೊಮ್ಮೆ ಆಸ್ಪ್ರೇಲಿಯಾ 4-0ಯಲ್ಲಿ ಸರಣಿ ಜಯಿಸಿದರೆ, 110ಕ್ಕೆ ರೇಟಿಂಗ್‌ ಅಂಕ ಏರಿಕೆಯಾಗಲಿದ್ದು ಭಾರತ ತಂಡ 108 ಅಂಕಗಳೊಂದಿಗೆ (ಇಂಗ್ಲೆಂಡ್‌ಗಿಂತ 0.065 ಅಂಕ ಹಿಂದೆ) 3ನೇ ಸ್ಥಾನಕ್ಕೆ ಕುಸಿಯಲಿದೆ.

ಆಸ್ಪ್ರೇಲಿಯಾ 3-0ಯಲ್ಲಿ ಸರಣಿ ಗೆದ್ದರೆ, ಭಾರತ 109 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿಯಲಿದೆ. ಆಸ್ಪ್ರೇಲಿಯಾ 108 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಲಿದೆ. ಆಸ್ಪ್ರೇಲಿಯಾ 3-1ರಲ್ಲಿ ಗೆದ್ದರೆ, 107 ಅಂಕಗಳನ್ನು ಪಡೆಯಲಿದ್ದು, 3ನೇ ಸ್ಥಾನಕ್ಕೇರಲಿದೆ. ಆಗ ಭಾರತ 111 ಅಂಕಗಳೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದರೆ, ಇಂಗ್ಲೆಂಡ್‌ 108 ಅಂಕಗಳೊಂದಿಗೆ 2ನೇ ಸ್ಥಾನ ಉಳಿಸಿಕೊಳ್ಳಲಿದೆ.

ಕೊಹ್ಲಿಗೆ ಅತ್ಯುತ್ತಮ ಅವಕಾಶ!

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ 935 ರೇಟಿಂಗ್‌ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿರುವ ಆಸ್ಪ್ರೇಲಿಯಾದ ನಿಷೇಧಿತ ಆಟಗಾರ ಸ್ಟೀವ್‌ ಸ್ಮಿತ್‌(910)ಗಿಂತ ಕೊಹ್ಲಿ 25 ಅಂಕ ಮುಂದಿದ್ದು, 4 ಪಂದ್ಯಗಳ ಸರಣಿಯಲ್ಲಿ ವಿರಾಟ್‌ ಉತ್ತಮ ಪ್ರದರ್ಶನ ತೋರಿದರೆ ಅಗ್ರಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಜತೆಗೆ ಅವರ ವೃತ್ತಿಬದುಕಿನ ಸಾರ್ವಕಾಲಿಕ ಗರಿಷ್ಠ ರೇಟಿಂಗ್‌ ಅಂಕವೂ ದೊರೆಯಲಿದೆ. 

ಮೊದಲ ಹಾಗೂ 2ನೇ ಸ್ಥಾನದ ನಡುವೆ ಇರುವ ಅಂತರವೂ ಹೆಚ್ಚಲಿದೆ. ಇದೇ ವೇಳೆ 6ನೇ ಸ್ಥಾನದಲ್ಲಿರುವ ಚೇತೇಶ್ವರ್‌ ಪೂಜಾರಗೂ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಮೇಲೇಳಲು ಅವಕಾಶವಿದೆ. 5ನೇ ಸ್ಥಾನದಲ್ಲಿರುವ ಡೇವಿಡ್‌ ವಾರ್ನರ್‌ ಸರಣಿಯಲ್ಲಿ ಆಡುತ್ತಿಲ್ಲ. ವಾರ್ನರ್‌ 803 ರೇಟಿಂಗ್‌ ಅಂಕ ಹೊಂದಿದ್ದು, ಪೂಜಾರ 765 ಅಂಕ ಹೊಂದಿದ್ದಾರೆ. ಸರಣಿಯುದ್ದಕ್ಕೂ ಲಯ ಕಾಯ್ದುಕೊಂಡು ಉತ್ತಮ ಪ್ರದರ್ಶನ ನೀಡಿದರೆ, ಪೂಜಾರ 4ನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ ನಾಯಕ ಜೋ ರೂಟ್‌ (807)ರನ್ನೂ ಹಿಂದಿಕ್ಕಬಹುದು.

ಬೌಲರ್‌ಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ರವೀಂದ್ರ ಜಡೇಜಾ (812 ರೇಟಿಂಗ್‌ ಅಂಕ) ಹಾಗೂ ಆರ್‌.ಅಶ್ವಿನ್‌ (777 ರೇಟಿಂಗ್‌ ಅಂಕ) ಕ್ರಮವಾಗಿ 5 ಹಾಗೂ 7ನೇ ಸ್ಥಾನದಲ್ಲಿದ್ದು, ಈ ಇಬ್ಬರಿಗೂ ಏರಿಕೆ ಕಾಣಲು ಅವಕಾಶವಿದೆ. ಜಡೇಜಾ ಬ್ಯಾಟಿಂಗ್‌ನಲ್ಲೂ ಮಿಂಚಿದರೆ, ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಬಹುದು. ಸದ್ಯ ಅಗ್ರಸ್ಥಾನದಲ್ಲಿರುವ ಬಾಂಗ್ಲಾದೇಶದ ಶಕೀಬ್‌-ಅಲ್‌ ಹಸನ್‌ (415) ಹಾಗೂ ಜಡೇಜಾ ನಡುವೆ 15 ಅಂಕಗಳ ಅಂತರವಿದೆ. 341 ಅಂಕಗಳೊಂದಿಗೆ ಅಶ್ವಿನ್‌ 6ನೇ ಸ್ಥಾನದಲ್ಲಿದ್ದಾರೆ.

loader