ವೆಲ್ಲಿಂಗ್ಟನ್[ಫೆ.06]: ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ಟಿಮ್ ಸೈಫರ್ಟ್ ಸಿಡಿಲಬ್ಬರದ ಅರ್ಧಶತಕ ಹಾಗೂ ಕಾಲಿನ್ ಮನ್ರೋ, ಕೇನ್ ವಿಲಿಯಮ್ಸನ್, ರಾಸ್ ಟೇಲರ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 219 ರನ್ ಕಲೆಹಾಕಿದ್ದು, ಟೀಂ ಇಂಡಿಯಾ ಗೆಲ್ಲಲು ಕಠಿಣ ಸವಾಲು ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ಭರ್ಜರಿ ಆರಂಭ ಪಡೆಯಿತು. ಕಿವೀಸ್ ಆರಂಭಿಕರಾದ ಟಿಮ್ ಸೈಫರ್ಟ್-ಕಾಲಿನ್ ಮನ್ರೋ ಜೋಡಿ ಸ್ಫೋಟಕ ಆರಂಭ ಒದಗಿಸಿದರು. ಪವರ್’ಪ್ಲೇ ಓವರ್’ಗಳಲ್ಲಿ 66 ರನ್ ಕಲೆಹಾಕಿದ ಜೋಡಿ, ಭಾರತೀಯ ಬೌಲರ್’ಗಳನ್ನು ಇನ್ನಿಲ್ಲದಂತೆ ಕಾಡಿತು. ಮೊದಲ ವಿಕೆಟ್’ಗೆ ಈ ಜೋಡಿ 8.2 ಓವರ್’ಗಳಲ್ಲಿ 86 ರನ್ ಕಲೆಹಾಕಿತು. ಈ ಜೋಡಿಯನ್ನು ಕೃಣಾಲ್ ಪಾಂಡ್ಯ ಬೇರ್ಪಡಿಸಿದರು. ಕೇವಲ 20 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ನೆರವಿನೊಂದಿಗೆ 34 ರನ್ ಬಾರಿಸಿದ್ದ ಮನ್ರೋ, ವಿಜಯ್ ಶಂಕರ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಆ ಬಳಿಕ ಎರಡನೇ ವಿಕೆಟ್’ಗೆ ಸೈಫರ್ಟ್-ವಿಲಿಯಮ್ಸನ್ ಜೋಡಿ 48
ರನ್ ಕಲೆಹಾಕುವುದರೊಂದಿಗೆ ತಂಡದ ಮೊತ್ತವನ್ನು 130ರ ಗಡಿ ದಾಟಿಸಿದರು. ಶತಕದತ್ತ ಮುನ್ನುಗ್ಗುತ್ತಿದ್ದ ಟಿಮ್ ಸೈಫರ್ಟ್ ಕ್ಲೀನ್ ಬೌಲ್ಡ್ ಮಾಡುವಲ್ಲಿ ಖಲೀಲ್ ಅಹಮ್ಮದ್ ಯಶಸ್ವಿಯಾದರು. ಟಿಮ್ ಸೈಫರ್ಟ್ ವಿಕೆಟ್ ಒಪ್ಪಿಸುವ ಮುನ್ನ ಕೇವಲ 43 ಎಸೆತಗಳಲ್ಲಿ 7 ಬೌಂಡರಿ ಹಾಗೂ 6 ಸಿಕ್ಸರ್’ಗಳ ನೆರವಿನಿಂದ 84 ರನ್ ಸಿಡಿಸಿದರು. ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಮಿಚೆಲ್ ಬ್ಯಾಟಿಂಗ್ ಕೇವಲ 8 ರನ್’ಗಳಿಗೆ ಸೀಮಿತಾಯಿತು. ಇದರ ಬೆನ್ನಲ್ಲೇ ವಿಲಿಯಮ್ಸನ್ ಮೂರು ಸಿಕ್ಸರ್ ನೆರವಿನಿಂದ 34 ರನ್ ಬಾರಿಸಿ ಚಹಲ್’ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ರಾಸ್ ಟೇಲರ್[23], ಸ್ಕಾಟ್ ಕುಗ್ಗೆಲೆಜಿನ್[15] ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡ ಇನ್ನೂರರ ಗಡಿ ದಾಟಲು ನೆರವಾದರು.

ಭಾರತ ಪರ ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಖಲೀಲ್ ಅಹಮ್ಮದ್, ಕೃಣಾಲ್ ಪಾಂಡ್ಯ, ಯುಜುವೇಂದ್ರ ಚಹಲ್ ಒಂದೊಂದು ವಿಕೆಟ್ ಪಡೆದರು.

ಒಟ್ಟಿಗೆ ಕಣಕ್ಕಿಳಿದ ಪಾಂಡ್ಯ ಬ್ರದರ್ಸ್: ಟೀಂ ಇಂಡಿಯಾದ ಆಲ್ರೌಂಡರ್ ಸಹೋದರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೃಣಾಲ್ ಪಾಂಡ್ಯ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಟ್ಟಿಗೆ ಟೀಂ ಇಂಡಿಯಾ ಪರ ಕಣಕ್ಕಿಳಿದರು. ಈ ಮೂಲಕ ಮಹೀಂದರ್ ಅಮರ್’ನಾಥ್- ಸುರೇಂದರ್ ಅಮರ್’ನಾಥ್, ಇರ್ಫಾನ್ ಪಠಾಣ್-ಯೂಸುಫ್ ಪಠಾಣ್ ಬಳಿಕ ಸೀಮಿತ ಓವರ್’ಗಳ ಪಂದ್ಯದಲ್ಲಿ ಭಾರತ ಪರ ಕಣಕ್ಕಿಳಿದ ಮೂರನೇ ಸಹೋದರರು ಎನ್ನುವ ಕೀರ್ತಿಗೆ ಪಾಂಡ್ಯ ಬ್ರದರ್ಸ್ ಭಾಜನರಾಗಿದ್ದಾರೆ.        

ಭಾರತಕ್ಕಿದೆ ಪಾಕ್‌ ದಾಖಲೆ ಸರಿಗಟ್ಟುವ ಅವಕಾಶ
ಸತತ 10 ಟಿ20 ಸರಣಿಯಲ್ಲಿ ಅಜೇಯವಾಗಿ ಉಳಿದಿರುವ ಭಾರತಕ್ಕೆ ಪಾಕಿಸ್ತಾನದ ದಾಖಲೆಯನ್ನು ಸರಿಗಟ್ಟುವ ಅವಕಾಶವಿದೆ. ಪಾಕಿಸ್ತಾನ ಸತತ 11 ಟಿ20 ಸರಣಿಗಳಲ್ಲಿ ಅಜೇಯವಾಗಿ ಉಳಿದಿತ್ತು. ಇತ್ತೀಚೆಗೆ ದ.ಆಫ್ರಿಕಾ ವಿರುದ್ಧ 0-2ರಲ್ಲಿ ಸರಣಿ ಸೋಲುಂಡ ಕಾರಣ ಗೆಲುವಿನ ಓಟಕ್ಕೆ ತೆರೆಬಿದ್ದಿತ್ತು. 
ಭಾರತ ತಂಡ ನ್ಯೂಜಿಲೆಂಡ್‌ ಹಾಗೂ ಇದೇ ತಿಂಗಳಂತ್ಯದಲ್ಲಿ ಆಸ್ಪ್ರೇಲಿಯಾ ವಿರುದ್ಧ ನಡೆಯಲಿರುವ ಸರಣಿ ಗೆದ್ದರೆ ಇಲ್ಲವೇ ಡ್ರಾ ಮಾಡಿಕೊಂಡರೆ ಸತತ 12 ಸರಣಿಗಳಲ್ಲಿ ಅಜೇಯವಾಗಿ ಉಳಿಯಲಿದ್ದು, ವಿಶ್ವ ದಾಖಲೆ ಬರೆಯಲಿದೆ. ಭಾರತ ಕೊನೆ ಬಾರಿಗೆ ಟಿ20 ಸರಣಿ ಸೋತಿದ್ದು 2017ರ ಜುಲೈನಲ್ಲಿ.

ಸಂಕ್ಷಿಪ್ತ ಸ್ಕೋರ್:

ನ್ಯೂಜಿಲೆಂಡ್: 219/6
ಟಿಮ್ ಸೈಫರ್ಟ್: 84
ಹಾರ್ದಿಕ್ ಪಾಂಡ್ಯ: 51/2

[* ನ್ಯೂಜಿಲೆಂಡ್ ಬ್ಯಾಟಿಂಗ್ ಮುಕ್ತಾಯದ ವೇಳೆಗೆ]