ಬೇ ಓವಲ್[ಜ.28]: ಮಾಡು ಇಲ್ಲವೇ ಮಡಿ ಎನಿಸಿರುವ ಆತಿಥೇಯ ನ್ಯೂಜಿಲೆಂಡ್ ತಂಡವು ಟೀಂ ಇಂಡಿಯಾ ಎದುರು ಮತ್ತೊಮ್ಮೆ ಆರಂಭದಲ್ಲೇ ಆಘಾತ ಅನುಭವಿಸಿದೆ. ತಂಡದ ಮೊತ್ತ ಕೇವಲ 26 ರನ್’ಗಳಾಗುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿಕೊಂಡಿದ್ದಾರೆ.

ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಪಂದ್ಯದ 2ನೇ ಓವರ್’ನ ಕೊನೆಯ ಎಸೆತದಲ್ಲಿ ಆರಂಭಿಕ ಬ್ಯಾಟ್ಸ್’ಮನ್ ಕಾಲಿನ್ ಮನ್ರೋ[7] ವಿಕೆಟ್ ಕಬಳಿಸುವಲ್ಲಿ ಮೊಹಮ್ಮದ್ ಶಮಿ ಯಶಸ್ವಿಯಾಗಿದರು. ಇನ್ನು 13 ರನ್ ಬಾರಿಸಿ ಉತ್ತಮ ಬ್ಯಾಟಿಂಗ್ ನಡೆಸುವ ಮುನ್ಸೂಚನೆ ನೀಡಿದ್ದ ಮಾರ್ಟಿನ್ ಗಪ್ಟಿಲ್ ಮತ್ತೊಮ್ಮೆ ಕೆಟ್ಟ ಹೊಡೆತಕ್ಕೆ ಯತ್ನಿಸಿ ಕೈಸುಟ್ಟುಕೊಂಡರು. ಗಪ್ಟಿಲ್ ವಿಕೆಟ್ ಭುವನೇಶ್ವರ್ ಕುಮಾರ್ ಪಾಲಾಯಿತು.

ಭಾರತ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಗಾಯಗೊಂಡಿರುವ ಮಹೇಂದ್ರ ಸಿಂಗ್ ಧೋನಿ ಬದಲಿಗೆ ದಿನೇಶ್ ಕಾರ್ತಿಕ್, ವಿಜಯ್ ಶಂಕರ್ ಬದಲಿಗೆ ಹಾರ್ದಿಕ್ ಪಾಂಡ್ಯ ತಂಡಕ್ಕೆ ಕಮ್’ಬ್ಯಾಕ್ ಮಾಡಿದ್ದಾರೆ. ಇನ್ನು ನ್ಯೂಜಿಲೆಂಡ್ ತಂಡದಲ್ಲಿ ಏಕೈಕ ಬದಲಾವಣೆ ಬದಲಾವಣೆ ಮಾಡಲಾಗಿದ್ದು, ಕಾಲಿನ್ ಡಿ ಗ್ರಾಂಡ್’ಹೋಂ ಬದಲಿಗೆ ಮೈಕಲ್ ಸ್ಯಾಂಟರ್ ತಂಡ ಕೂಡಿಕೊಂಡಿದ್ದಾರೆ.
5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಈಗಾಗಲೇ 2-0 ಮುನ್ನಡೆ ಕಾಯ್ದುಕೊಂಡಿದ್ದು, ಈ ಪಂದ್ಯವನ್ನು ಜಯಿಸಿದರೆ, ಸರಣಿ ಕೈವಶ ಮಾಡಿಕೊಳ್ಳಲಿದೆ.