ಸಿಡ್ನಿ[ಜ.07]: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಬರೋಬ್ಬರಿ 7 ದಶಕಗಳ ಬಳಿಕ ಕೊನೆಗೂ ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಜಯಿಸಿದ ಸಾಧನೆ ಮಾಡಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಲ್ಲಿ ಟೆಸ್ಟ್ ಪಂದ್ಯವನ್ನು ಜಯಿಸಿದೆ.

ಸಿಡ್ನಿ ಟೆಸ್ಟ್’ನ ಅಂತಿಮ ದಿನ ಮಳೆಯ ಕಾರಣದಿಂದ ಒಂದೂ ಎಸೆತ ಕಾಣದೇ ಪಂದ್ಯವನ್ನು ಡ್ರಾಗೊಂಡಿತು. ಅಡಿಲೇಡ್’ನಲ್ಲಿ 31 ರನ್’ಗಳಿಂದ ಮೊದಲ ಟೆಸ್ಟ್ ಗೆದ್ದು ಶುಭಾರಂಭ ಮಾಡಿದ್ದ ಟೀಂ ಇಂಡಿಯಾ, ಪರ್ತ್’ನಲ್ಲಿ ನಡೆದ ಎರಡನೇ ಟೆಸ್ಟ್’ನಲ್ಲಿ ಆಸ್ಟ್ರೇಲಿಯಾ 146 ರನ್’ಗಳಿಂದ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿತ್ತು. ಇನ್ನು ಮೆಲ್ಬರ್ನ್’ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಭಾರತ 137 ರನ್’ಗಳಿಂದ ಜಯಿಸುವ ಮೂಲಕ 2-1ರ ಮುನ್ನಡೆ ಸಾಧಿಸಿತ್ತು. 

ಸರಣಿಯುದ್ಧಕ್ಕೂ ಅತ್ಯದ್ಭುತ ಪ್ರದರ್ಶನ ತೋರಿದ ಚೇತೇಶ್ವರ್ ಪೂಜಾರ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು. ಈ ಸರಣಿಯಲ್ಲಿ ಪೂಜಾರ ಮೂರು ಶತಕ ಸಿಡಿಸಿ ಒಟ್ಟಾರೆ 521 ರನ್ ಬಾರಿಸಿದ್ದಾರೆ.

ಭಾರತ 1947-48ರಿಂದ 2014-15ರ ವರಗೆ ಆಸಿಸ್ ಪ್ರವಾಸ ಕೈಗೊಂಡಿದ್ದರೂ ಒಮ್ಮೆಯೂ ಟೆಸ್ಟ್ ಸರಣಿ ಗೆಲುವು ಕನಸಾಗಿಯೇ ಉಳಿದಿತ್ತು. ಆದರೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಸಿಸ್ ಬಗ್ಗು ಬಡಿಯುವ ಮೂಲಕ ಕಾಂಗರೂ ನೆಲದಲ್ಲಿ ಹೊಸ ಇತಿಹಾಸ ಬರೆದಿದೆ.