2004ರಲ್ಲಿ ವೆಸ್ಟ್ ಇಂಡೀಸ್ ಪರ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಬ್ರಾವೋ, 40 ಟೆಸ್ಟ್, 164 ಏಕದಿನ ಹಾಗೂ 66 ಟಿ20 ಪಂದ್ಯಗಳಲ್ಲಿ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ.
ಜಮೈಕಾ[ಅ.25]: ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್ರೌಂಡರ್ ಡ್ವೇನ್ ಬ್ರಾವೋ ತಮ್ಮ 14 ವರ್ಷಗಳ ಸುದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಪೂರ್ಣವಿರಾಮವಿಟ್ಟಿದ್ದು, ಇಂದು ಅಂತರಾಷ್ಟ್ರೀಯ ಕ್ರಿಕೆಟ್’ನ ಎಲ್ಲಾ ಮಾದರಿಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ. ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಕೆಲವೇ ತಿಂಗಳುಗಳಿರುವಾಗ ಬ್ರಾವೋ ವಿದಾಯ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.
2004ರಲ್ಲಿ ವೆಸ್ಟ್ ಇಂಡೀಸ್ ಪರ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಬ್ರಾವೋ, 40 ಟೆಸ್ಟ್, 164 ಏಕದಿನ ಹಾಗೂ 66 ಟಿ20 ಪಂದ್ಯಗಳಲ್ಲಿ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಅಂದರೆ 2016ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಕೊನೆಯ ಬಾರಿಗೆ ವೆಸ್ಟ್ ಇಂಡೀಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. 35 ವರ್ಷದ ಬ್ರಾವೋ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದ್ದರೂ, ಪ್ರಾಂಚೈಸಿ ಆಧರಿತ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.
ಟೆಸ್ಟ್ ಕ್ರಿಕೆಟ್’ನಲ್ಲಿ 2,200 ರನ್ ಹಾಗೂ 86 ವಿಕೆಟ್ ಕಬಳಿಸಿರುವ ಬ್ರಾವೋ, ಏಕದಿನ ಕ್ರಿಕೆಟ್’ನಲ್ಲಿ 2,968 ಹಾಗೂ 199 ವಿಕೆಟ್ ತಮ್ಮ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ. ಇನ್ನು ಟಿ20 ಕ್ರಿಕೆಟ್’ನಲ್ಲಿ 1,142 ರನ್ ಹಾಗೂ 52 ವಿಕೆಟ್ ಎಗರಿಸಿದ್ದಾರೆ. 2012 ಹಾಗೂ 2016ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಬ್ರಾವೋ ಐಪಿಎಲ್’ನಲ್ಲಿ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ಸಿಪಿಎಲ್’ನಲ್ಲಿ ಟ್ರೈನ್’ಬಾಗೋ ನೈಟ್’ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
