ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಸದ್ಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆ್ಯಷಸ್  ಸರಣಿಯ 4ನೇ ಟೆಸ್ಟ್ ವೇಳೆ ಮೊಬೈಲ್ ಫೋನ್ ಬಳಕೆ ಮಾಡಲು ಅನುಮತಿ ನೀಡಲಾಗಿದೆ. ದಿನದಾಟ ಆರಂಭಕ್ಕೂ ಮುನ್ನ, ದಿನದಾಟ ಮುಕ್ತಾಯದ ಬಳಿಕ ಆಟಗಾರರು ಮೊಬೈಲ್ ಬಳಕೆ ಮಾಡಬಹುದಾಗಿದೆ.

ಸಿಡ್ನಿ(ಡಿ.29): ಫಿಕ್ಸಿಂಗ್ ಭೂತ ಕ್ರಿಕೆಟ್ ಜಗತ್ತನ್ನು ಬೆಂಬಿಡದೆ ಕಾಡುತ್ತಿದ್ದು, ಇದನ್ನು ತಡೆಗಟ್ಟಲು ಕ್ರಿಕೆಟ್ ಆಸ್ಟ್ರೇಲಿಯಾ ಮೊಬೈಲ್ ಆ್ಯಪ್ ಬಳಕೆ ಮಾಡಲು ಮುಂದಾಗಿದೆ. ಆ್ಯಪ್ ಬಳಕೆ ಮಾಡುವ ಮೂಲಕ ಆಟಗಾರರು, ಅನುಮಾನಾಸ್ಪದ ವ್ಯಕ್ತಿಗಳು ತಮ್ಮನ್ನು ಸಂಪರ್ಕಿಸಿದರೆ ತಕ್ಷಣ ಕ್ರಿಕೆಟ್ ಆಸ್ಟ್ರೇಲಿಯಾ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಬಹುದಾಗಿದೆ. ಅಷ್ಟೇ ಅಲ್ಲ, ಈ ಮೇಲ್ ಮುಖಾಂತರ ಇಲ್ಲವೇ ಸಾಮಾಜಿಕ ಜಾಲತಾಣಗಳ ಮೂಲಕ ಬೆಟ್ಟಿಂಗ್ ಅಥವಾ ಸ್ಪಾಟ್ ಫಿಕ್ಸಿಂಗ್ ಪ್ರಸ್ತಾಪ ಬಂದರೆ ಅದನ್ನೂ ಸಹ ಭದ್ರತಾ ಸಿಬ್ಬಂದಿಯ ಗಮನಕ್ಕೆ ತರಬಹುದಾಗಿದೆ.

ಆಟಗಾರರಿಗೆ ಬರುವ ದೂರವಾಣಿ ಕರೆಗಳು, ಎಸ್'ಎಂಎಸ್'ಗಳು ಯಾವ ದೇಶದಿಂದ ಇಲ್ಲವೇ ಯಾವ ಪ್ರಾಂತ್ಯದಿಂದ ಬರುತ್ತಿವೆ, ಯಾವ ಐ.ಪಿ. ವಿಳಾಸದಿಂದ ಈ-ಮೇಲ್ ಕಳಿಸಲಾಗುತ್ತಿದೆ ಎನ್ನುವುದನ್ನು ಈ ಆ್ಯಪ್ ಪತ್ತೆ ಹಚ್ಚಲಿದೆ. ಸಾಕ್ಷ್ಯಾಧಾರಗಳ ಪತ್ತೆಗಾಗಿ ಆ್ಯಪ್ ಸಿದ್ದಪಡಿಸಿರುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಈ ಬಗ್ಗೆ ಮಾತನಾಡಿರುವ ಕ್ರಿಕೆಟ್ ಸಂಸ್ಥೆ ವಕ್ತಾರ ಟಿಮ್ ವೈಟೇಕರ್, 'ಕ್ರಿಕೆಟ್'ನಲ್ಲಿ ನೂತನ ತಂತ್ರಜ್ಞಾನಗಳ ಬಳಕೆಯಲ್ಲಿ ಕ್ರಿಕಟ್ ಆಸ್ಟ್ರೇಲಿಯಾ ಸದಾ ಮುಂದಿದೆ. ಆಟದ ಹಾಗೂ ಆಟಗಾರರ ಘನತೆ ಕಾಪಾಡಲು ಆ್ಯಪ್ ಸಹಕಾರಿಯಾಗಲಿದೆ ಎಂದಿದ್ದಾರೆ.

ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಸದ್ಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆ್ಯಷಸ್ ಸರಣಿಯ 4ನೇ ಟೆಸ್ಟ್ ವೇಳೆ ಮೊಬೈಲ್ ಫೋನ್ ಬಳಕೆ ಮಾಡಲು ಅನುಮತಿ ನೀಡಲಾಗಿದೆ. ದಿನದಾಟ ಆರಂಭಕ್ಕೂ ಮುನ್ನ, ದಿನದಾಟ ಮುಕ್ತಾಯದ ಬಳಿಕ ಆಟಗಾರರು ಮೊಬೈಲ್ ಬಳಕೆ ಮಾಡಬಹುದಾಗಿದೆ.

ಪರ್ತ್'ನಲ್ಲಿ ನಡೆದ ಮೂರನೇ ಟೆಸ್ಟ್'ನಲ್ಲಿ ಸ್ಪಾಟ್ ಫಿಕ್ಸಿಂಗ್ ಶಂಕೆ ವ್ಯಕ್ತವಾಗಿತ್ತು. ಬ್ರಿಟನ್'ನ 'ದಿ ಸನ್' ಪತ್ರಿಕೆ ನಡೆಸಿದ್ದ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತೀಯ ಮೂಲದ ಬುಕ್ಕಿಗಳು ಪರ್ತ್ ಟೆಸ್ಟ್ ಫಿಕ್ಸಿಂಗ್ ನಡೆಸಿರುವುದಾಗಿ ಹೇಳಿದ್ದರು. ಅಲ್ಲದೇ ಬಿಗ್ ಬ್ಯಾಶ್ ಲೀಗ್ ಹಾಗೂ ಐಪಿಎಲ್'ನಲ್ಲೂ ಫಿಕ್ಸಿಂಗ್ ನಡೆಸಿರುವುದಾಗಿ ಬುಕ್ಕಿಗಳು ಹೇಳಿದ್ದರು. ಈ ಬಗ್ಗೆ ಐಸಿಸಿ ತನಿಖೆ ಕೈಗೆತ್ತಿಕೊಂಡಿತ್ತು. ಆದರೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗದ ಕಾರಣ ಕ್ಲೀನ್'ಚಿಟ್ ನೀಡಿತ್ತು.