ಅಡಿಲೇಡ್[ಡಿ.07]: ಅನುಭವಿ ಆಫ್’ಸ್ಪಿನ್ನರ್ ರವಿಚಂದ್ರನ್ ಅಶ್ವಿನ್[3], ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಇಶಾಂತ್ ಶರ್ಮಾ[ತಲಾ 2] ಮಾರಕ ದಾಳಿಗೆ ನಲುಗಿರುವ ಆತಿಥೇಯ ಆಸ್ಟ್ರೇಲಿಯಾ ಎರಡನೇ ದಿನದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 191 ರನ್ ಬಾರಿಸಿದ್ದು, ಇನ್ನೂ 59 ರನ್’ಗಳ ಹಿನ್ನಡೆಯಲ್ಲಿದೆ.

ಮೊದಲನೇ ದಿನದಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 250 ರನ್ ಬಾರಿಸಿದ್ದ ಭಾರತ ಎರಡನೇ ದಿನದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸುವ ಮೂಲಕ ಆಲೌಟ್ ಆಯಿತು. ಇನ್ನು ಆಸ್ಟ್ರೇಲಿಯಾ ಕೂಡಾ ಮೊದಲ ಓವರ್’ನಲ್ಲೇ ವಿಕೆಟ್ ಕಳೆದುಕೊಂಡಿತು. ಇಶಾಂತ್ ಶರ್ಮಾ ಬೌಲಿಂಗ್’ನಲ್ಲಿ ಆ್ಯರೋನ್ ಫಿಂಚ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಮಾರ್ಕಸ್ ಹ್ಯಾರಿಸ್-ಉಸ್ಮಾನ್ ಖ್ವಾಜಾ ಎರಡನೇ ವಿಕೆಟ್’ಗೆ 45 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ವೇಳೆ ದಾಳಿಗಿಳಿದ ಅಶ್ವಿನ್ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು.  ಮಾರ್ಕಸ್ ಹ್ಯಾರಿಸ್ ಉಸ್ಮಾನ್ ಖ್ವಾಜಾ ಹಾಗೂ ಶಾನ್ ಮಾರ್ಶ್ ಬಲಿ ಪಡೆಯುವ ಮೂಲಕ ಅಶ್ವಿನ್ ಭಾರತಕ್ಕೆ ಮೇಲುಗೈ ತಂದಿತ್ತರು. ಪೀಟರ್ ಹ್ಯಾಂಡ್ಸ್’ಕಂಬ್[34] ನೆಲಕಚ್ಚಿ ಆಡುವ ಪ್ರಯತ್ನ ಮಾಡಿದರಾದರೂ ಬುಮ್ರಾ ವಿಕೆಟ್ ಪಡೆಯುವಲ್ಲಿ ಸಫಲವಾದರು. ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ನೆಲಕಚ್ಚಿ ಆಡಿದ ತ್ರಾವಿಸ್ ಹೆಡ್ ಅಜೇಯ 61 ರನ್ ಸಿಡಿಸಿದ್ದಾರೆ. ಇನ್ನು ಮಿಚೆಲ್ ಸ್ಟಾರ್ಕ್ 8 ರನ್ ಬಾರಿಸಿದ್ದು ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮೊದಲ ಟೆಸ್ಟ್ ಪಂದ್ಯವೀಗ ರೋಚಕಘಟ್ಟದತ್ತ ತಲುಪಿದ್ದು, ಮೂರನೇ ದಿನದಾಟ ಪಂದ್ಯದ ಫಲಿತಾಂಶವನ್ನು ನಿರ್ಧಾರಿಸಲಿದೆ. ಆದಷ್ಟು ಬೇಗ ಆಸ್ಟ್ರೇಲಿಯಾದ ಉಳಿದ 3 ವಿಕೆಟ್ ಕಬಳಿಸಿ, ಆನಂತರ ಟೀಂ ಇಂಡಿಯಾ ಗೌರವಾನ್ವಿತ ಮೊತ್ತ ಕಲೆಹಾಕಿದರೆ ವಿರಾಟ್ ಪಡೆ ಜಯದೊಂದಿಗೆ ಶುಭಾರಂಭ ಮಾಡಬಹುದು.

ಸಂಕ್ಷಿಪ್ತ ಸ್ಕೋರ್:

ಭಾರತ: 250/10
ಚೇತೇಶ್ವರ್ ಪೂಜಾರ: 123
ಜೋಸ್ ಹ್ಯಾಜಲ್’ವುಡ್:52/3
ಆಸ್ಟ್ರೇಲಿಯಾ: 191/7
ತ್ರಾವಿಸ್ ಹೆಡ್: 61
[* 2ನೇ ದಿನದಂತ್ಯಕ್ಕೆ]