ನವದೆಹಲಿ(ನ.01): ದಾಖಲೆಯ 37 ತಂಡಗಳು 2018-19ರ ರಣಜಿ ಟ್ರೋಫಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದು, ಇಂದಿನಿಂದ ಈ ಸಾಲಿನ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ. ಈಶಾನ್ಯ ಭಾರತದ 7 ರಾಜ್ಯಗಳು ಸೇರಿ ಒಟ್ಟು 9 ಹೊಸ ತಂಡಗಳು ಈ ವರ್ಷ ದೇಸಿ ಋುತುವಿನಲ್ಲಿ ಸೆಣಸಲಿವೆ.

ಆಡಳಿತಾತ್ಮಕ ಸವಾಲುಗಳನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದರೂ, ಬಿಸಿಸಿಐಗೆ ಈ ಟೂರ್ನಿ ಬಿಸಿ ತುಪ್ಪವಾಗಿ ಪರಿಣಮಿಸಲಿದೆ. ಒಂದೆಡೆ ದೇಶದ ಎಲ್ಲಾ ರಾಜ್ಯಗಳು ಸ್ಪರ್ಧಿಸಬೇಕು ಎನ್ನುವ ಉದ್ದೇಶವಾದರೆ, ಮತ್ತೊಂದೆಡೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸುವುದು ಅಂದುಕೊಂಡಷ್ಟು ಸುಲಭವಲ್ಲ ಎನ್ನುವುದು ಬಿಸಿಸಿಐಗೂ ತಿಳಿದಿದೆ.

37 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ‘ಎ’ ಹಾಗೂ ‘ಬಿ’ ಗುಂಪಿನಲ್ಲಿ 9 ತಂಡಗಳಿದ್ದರೆ ‘ಸಿ’ ಗುಂಪಿನಲ್ಲಿ 10 ತಂಡಗಳಿವೆ. ಚೊಚ್ಚಲ ಬಾರಿಗೆ ರಣಜಿಯಲ್ಲಿ ಆಡುತ್ತಿರುವ ಮಣಿಪುರ, ಅರುಣಾಚಲ ಪ್ರದೇಶ, ಮಿಜೋರಾಮ್‌, ಉತ್ತಾರಖಂಡ, ಸಿಕ್ಕಿಂ, ನಾಗಾಲ್ಯಾಂಡ್‌, ಮೇಘಾಲಯ, ಬಿಹಾರ ಹಾಗೂ ಪುದುಚೇರಿ ತಂಡಗಳಿಗೆ ಪ್ಲೇಟ್‌ ಗುಂಪಿನಲ್ಲಿ ಸ್ಥಾನ ನೀಡಲಾಗಿದೆ. ನ.1ರಿಂದ ನ.4ರ ವರೆಗೂ ಮೊದಲ ಸುತ್ತಿನ ಪಂದ್ಯಗಳು ನಡೆಯಲಿದ್ದು, ಕರ್ನಾಟಕದ ಅಭಿಯಾನ ನ.12ರಿಂದ ಆರಂಭಗೊಳ್ಳಲಿರುವ 2ನೇ ಸುತ್ತಿನೊಂದಿಗೆ ಆರಂಭಗೊಳ್ಳಲಿದೆ. ಜ.15ರಿಂದ ನಾಕೌಟ್‌ ಹಂತ ಆರಂಭಗೊಳ್ಳಲಿದ್ದು, ಫೆ.3ರಿಂದ 7ರ ವರೆಗೂ ಫೈನಲ್‌ ನಿಗದಿಯಾಗಿದೆ. ಹಾಲಿ ಚಾಂಪಿಯನ್‌ ವಿದರ್ಭ ಜತೆ ಕರ್ನಾಟಕ ‘ಎ’ ಗುಂಪಿನಲ್ಲಿದ್ದು, ಬಲಿಷ್ಠ ಸವಾಲು ಎದುರಾಗಲಿದೆ.

ಗುಂಪು ‘ಎ’: ಕರ್ನಾಟಕ, ಬರೋಡಾ, ಛತ್ತೀಸ್‌ಗಢ, ಗುಜರಾತ್‌, ಮಹಾರಾಷ್ಟ್ರ, ಮುಂಬೈ, ರೈಲ್ವೇಸ್‌, ಸೌರಾಷ್ಟ್ರ, ವಿದರ್ಭ.

ಗುಂಪು ‘ಬಿ’: ಆಂಧ್ರ, ಬಂಗಾಳ, ದೆಹಲಿ, ಹಿಮಾಚಲ ಪ್ರದೇಶ, ಹೈದರಾಬಾದ್‌, ಕೇರಳ, ಮಧ್ಯಪ್ರದೇಶ, ಪಂಜಾಬ್‌, ತ.ನಾಡು.

ಗುಂಪು ‘ಸಿ’: ಅಸ್ಸಾಂ, ಗೋವಾ, ಹರ್ಯಾಣ, ಜಮ್ಮು-ಕಾಶ್ಮೀರ, ಜಾರ್ಖಂಡ್‌, ಒಡಿಶಾ, ರಾಜಸ್ಥಾನ, ಸವೀರ್‍ಸಸ್‌, ತ್ರಿಪುರಾ, ಉ.ಪ್ರದೇಶ.

ಪ್ಲೇಟ್‌ ಗುಂಪು: ಅರುಣಾಚಲ, ಬಿಹಾರ, ಮಣಿಪುರ, ಮೇಘಾಲಯ, ಮಿಜೋರಾಮ್‌,ನಾಗಾಲ್ಯಾಂಡ್‌,ಪುದುಚೇರಿ, ಸಿಕ್ಕಿಂ, ಉತ್ತರಾಖಂಡ.

ಟೂರ್ನಿ ಮಾದರಿ ಹೇಗೆ?

ಗುಂಪು ಹಂತದಲ್ಲಿ ರೌಂಡ್‌ ರಾಬಿನ್‌ ಮಾದರಿ ಅನುಸರಿಸಲಾಗುತ್ತದೆ. ಬಳಿಕ ‘ಎ’ ಹಾಗೂ ‘ಬಿ’ ಗುಂಪಿನಿಂದ ಸೇರಿ ಅಗ್ರ 5 ತಂಡಗಳು, ‘ಸಿ’ ಗುಂಪಿನಿಂದ 2 ಹಾಗೂ ಪ್ಲೇಟ್‌ ಗುಂಪಿನಿಂದ 1 ತಂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ. ‘ಎ’ ಹಾಗೂ ‘ಬಿ’ ಗುಂಪಿನಲ್ಲಿ ಕೊನೆ ಸ್ಥಾನ ಪಡೆಯುವ ತಂಡ ಮುಂದಿನ ವರ್ಷ ‘ಸಿ’ ಗುಂಪಿಗೆ ಹಿಂಬಡ್ತಿ ಪಡೆಯಲಿದೆ. ‘ಸಿ’ ಗುಂಪಿನಲ್ಲಿ ಕೊನೆ ಸ್ಥಾನ ಪಡೆಯುವ ತಂಡ ಪ್ಲೇಟ್‌ ಗುಂಪಿಗೆ ಹಿಂಬಡ್ತಿ ಪಡೆಯಲಿದೆ. ಪ್ಲೇಟ್‌ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನಾಕೌಟ್‌ಗೇರುವ ತಂಡ ಮುಂದಿನ ವರ್ಷ ‘ಸಿ’ ಗುಂಪಿಗೆ ಬಡ್ತಿ ಪಡೆಯಲಿದೆ.