ಜಮೈಕಾ[ಆ.12]: ಆರನೇ ಆವೃತ್ತಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ನಡೆಯುತ್ತಿದ್ದು ಈಗಾಗಲೇ ಅಂಪೈರ್’ಗಳಿಂದ ಸಾಕಷ್ಟು ಕಳಪೆ ತೀರ್ಮಾನಗಳು ಹೊರಬಂದಿವೆ. ಆದರೆ ಡೇವಿಡ್ ವಾರ್ನರ್ ವಿರುದ್ಧ ಹೊರಬಿದ್ದ ತೀರ್ಪು ಸಾಕಷ್ಟು ಅನುಮಾನ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಸೇಂಟ್ ಲೂಸಿಯಾ ಸ್ಟಾರ್ಸ್ ಹಾಗೂ ಗಯಾನ ಅಮೆಜಾನ್ ನಡುವಿನ ಪಂದ್ಯ ಅಂತಹದ್ದೊಂದು ಕಳಪೆ ತೀರ್ಪಗೆ ಸಾಕ್ಷಿಯಾಗಿದೆ.

ಸೇಂಟ್ ಲೂಸಿಯಾ ಸ್ಟಾರ್ಸ್ ತಂಡದ ಆರಂಭಿಕ ಬ್ಯಾಟ್ಸ್’ಮನ್ ಆಗಿ ಕಣಕ್ಕಿಳಿದಿದ್ದ ವಾರ್ನರ್ ಅವರು ಇಮ್ರಾನ್ ತಾಹಿರ್ ಬೌಲಿಂಗ್’ನಲ್ಲಿ ಅಂಪೈರ್ ನೀಡಿದ ಕೆಟ್ಟ ತೀರ್ಪಿನಿಂದ ಪೆವಿಲಿಯನ್ ಸೇರಬೇಕಾಯಿತು. ಏಳನೇ ಓವರ್’ನಲ್ಲಿ ದಾಳಿಗಿಳಿದ ತಾಹಿರ್ ತಾವೆಸೆದ ಎರಡನೇ ಬಾಲ್ ನೇರವಾಗಿ ರಿವರ್ಸ್’ಸ್ವೀಪ್ ಮಾಡುವ ಯತ್ನದಲ್ಲಿದ್ದ ವಾರ್ನರ್ ಮುಂಗೈಗೆ ತಾಗುತ್ತದೆ. ಇನ್ನು ಸ್ಪಷ್ಟವಾಗಿ ಹೇಳಬೇಕೆಂದರೆ ಚೆಂಡು ಕಾಲಿಗೆ ತಾಗುವುದೇ ಇಲ್ಲ. ಬೌಲರ್ ಮಾಡಿದ ಮನವಿಯನ್ನು ಯಾವುದೇ ಯೋಚನೆ ಮಾಡದೇ ತೀರ್ಪು ನೀಡಿದ್ದು ಸ್ವತಃ ಡೇವಿಡ್ ವಾರ್ನರ್ ಅವರಿಗೆ ಆಘಾತವನ್ನುಂಟು ಮಾಡುತ್ತದೆ.

ಅಂಪೈರ್ ಈ ತೀರ್ಪು ಪಂದ್ಯದ ಫಲಿತಾಂಶದ ಮೇಲೂ ಪ್ರಭಾವ ಬೀರಿತು ಎಂದರೆ ತಪ್ಪಾಗಲಾರದು. ವಾರ್ನರ್ 21 ಎಸೆತಗಳಲ್ಲಿ 11 ರನ್ ಬಾರಿಸಿ ನೆಲಕಚ್ಚಿ ಆಡುವಾಗಲೇ ಕಳಪೆ ತೀರ್ಪು ಬಂದಿದ್ದು ಸ್ಟಾರ್ಸ್ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಮೊದಲು ಬ್ಯಾಟ್ ಮಾಡಿದ ಗಯಾನ 142 ರನ್ ಬಾರಿಸಿತ್ತು. ಸುಲಭ ಗುರಿ ಬೆನ್ನತ್ತಿದ ಸ್ಟಾರ್ಸ್ ತಂಡವನ್ನು ಕೇವಲ 138 ರನ್’ಗಳಿಗೆ ನಿಯಂತ್ರಿಸಿತು.