೧೮ರ ಹರೆಯದ ಗುಕೇಶ್‌ ಚೀನಾದ ಡಿಂಗ್‌ ಲಿರೆನ್‌ರನ್ನು ಸೋಲಿಸಿ ವಿಶ್ವ ಚೆಸ್‌ ಚಾಂಪಿಯನ್‌ ಪಟ್ಟ ಅಲಂಕರಿಸಿದರು. ₹11.03 ಕೋಟಿ ಬಹುಮಾನ ಗೆದ್ದ ಗುಕೇಶ್‌, ಕ್ಯಾಸ್ಪರೋವ್‌ ದಾಖಲೆ ಮುರಿದು ಅತಿ ಕಿರಿಯ ವಿಶ್ವ ಚಾಂಪಿಯನ್‌ ಆದರು. ಗೆಲುವಿನ ನಂತರದ ಶಿಸ್ತುಬದ್ಧ ವರ್ತನೆ ಮೆಚ್ಚುಗೆಗೆ ಪಾತ್ರವಾಯಿತು.

ಸಿಂಗಾಪುರ: ಅತಿ ಚಿಕ್ಕ ವಯಸ್ಸಿನಲ್ಲೇ ಗುಕೇಶ್‌ಗೆ ಇಷ್ಟು ದೊಡ್ಡ ಯಶಸ್ಸು ಸಿಕ್ಕಿದ್ದಕ್ಕೆ ಅವರಲ್ಲಿರುವ ಶಿಸ್ತು, ಆಟಕ್ಕೆ ಅವರು ತೋರುವ ಗೌರವ ಪ್ರಮುಖ ಕಾರಣ. ಬಹುತೇಕ ಎಲ್ಲ ಕ್ರೀಡೆಗಳಲ್ಲಿ ಗೆದ್ದ ಆಟಗಾರ ಸಂಭ್ರಮಿಸುವ ಭರದಲ್ಲಿ ಹಲವು ಎಡವಟ್ಟು ಮಾಡಿದ್ದನ್ನು ನೋಡಿದ್ದೇವೆ. 

ಆದರೆ ಗುಕೇಶ್‌, ಗೆದ್ದ ಮೇಲೆ ತಾವು ಬಳಸಿದ ಕಪ್ಪು ಕಾಯಿಗಳು, ಡಿಂಗ್‌ ಲಿರೆನ್‌ ಬಳಸಿದ ಬಿಳಿ ಕಾಯಿಗಳನ್ನು ಚೆಸ್‌ ಬೋರ್ಡ್‌ ಮೇಲೆ ಕ್ರಮ ಬದ್ಧವಾಗಿ ಜೋಡಿಸಿ, ಚೆಸ್‌ ಬೋರ್ಡ್‌ಗೆ ಕೈ ಮುಗಿದು, ದೇವರಿಗೆ ಧನ್ಯವಾದ ಹೇಳಿ, ತಮ್ಮ ಐಡಿ ಕಾರ್ಡ್‌ ಕುತ್ತಿಗೆಗೆ ಹಾಕಿಕೊಂಡು ಆನಂತರ ಕುರ್ಚಿಯಿಂದ ಮೇಲೆದ್ದು ಹೊರನಡೆದರು. ಅವರ ಈ ಶಿಸ್ತು ಪಾಲನೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಗೆದ್ದಾಗ ಹಿಗ್ಗಬಾರದು ಎನ್ನುವುದಕ್ಕೆ ಗುಕೇಶ್‌ರ ವರ್ತನೆ ಮಾದರಿ ಎಂದು ಅನೇಕರು ಬಣ್ಣಿಸಿದ್ದಾರೆ.

Scroll to load tweet…

ಮೊದಲು ಧೋನಿ, ಆಮೇಲೆ ಹಾಕಿ ಈಗ ಗುಕೇಶ್; ಭಾರತೀಯರ ಯಶಸ್ಸಿನ ಹಿಂದಿದೆ ಈ ವಿದೇಶಿಗನ ಮಾಸ್ಟರ್ ಮೈಂಡ್!

ಗುಕೇಶ್‌ಗೆ ₹11.03 ಕೋಟಿ ಬಹುಮಾನ!

ನೂತನ ವಿಶ್ವ ಚೆಸ್‌ ಚಾಂಪಿಯನ್‌ ಡಿ.ಗುಕೇಶ್‌ಗೆ ಬರೋಬ್ಬರಿ 1.3 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು ₹11.03 ಕೋಟಿ) ಬಹುಮಾನ ಮೊತ್ತ ದೊರೆಯಿತು. ವಿಶ್ವ ಚಾಂಪಿಯನ್‌ಶಿಪ್‌ನ ಒಟ್ಟು ಬಹುಮಾನ ಮೊತ್ತ ₹21.10 ಕೋಟಿ ಆಗಿತ್ತು. 

ಪ್ರತಿ ಸುತ್ತು ಗೆಲುವಿಗೆ ಅಂದಾಜು ₹1.6 ಕೋಟಿ ದೊರೆಯಿತು. ಗುಕೇಶ್‌ 2, 11 ಹಾಗೂ 14ನೇ ಸುತ್ತುಗಳನ್ನು ಗೆದ್ದರು. ಲಿರೆನ್‌ ಮೊದಲ ಹಾಗೂ 12ನೇ ಸುತ್ತಿನಲ್ಲಿ ಜಯಿಸಿದರು. ಸುತ್ತು ಡ್ರಾಗೊಂಡಾಗ, ಆ ಸುತ್ತಿಗೆ ಮೀಸಲಿಟ್ಟಿದ್ದ ಬಹುಮಾನ ಮೊತ್ತವನ್ನು ಉಭಯ ಆಟಗಾರರಿಗೆ ಹಂಚಲಾಯಿತು. 14 ಸುತ್ತುಗಳ ಪೈಕಿ ಗುಕೇಶ್‌ 3 ಸುತ್ತು ಗೆದ್ದರೆ, ಲಿರೆನ್‌ 2 ಸುತ್ತುಗಳಲ್ಲಿ ಜಯಿಸಿದರು. ಉಳಿದ 9 ಸುತ್ತು ಡ್ರಾಗೊಂಡವು.

Scroll to load tweet…

ಅತಿಕಿರಿಯ ಚಾಂಪಿಯನ್‌: ಕ್ಯಾಸ್ಪ್ರೋವ್‌ ದಾಖಲೆ ಪತನ!

18ನೇ ವಯಸ್ಸಿಗೇ ವಿಶ್ವ ಚಾಂಪಿಯನ್‌ ಆಗುವ ಮೂಲಕ ದೊಮ್ಮರಾಜು ಗುಕೇಶ್‌ ಇತಿಹಾಸ ಬರೆದಿದ್ದಾರೆ. ಅತಿಕಿರಿಯ ವಿಶ್ವ ಚಾಂಪಿಯನ್‌ ಎನಿಸಿರುವ ಗುಕೇಶ್‌, ಸಾರ್ವಕಾಲಿಕ ಶ್ರೇಷ್ಠ ಆಟಗಾರ, ರಷ್ಯಾದ ಗ್ಯಾರಿ ಕ್ಯಾಸ್ಪ್ರೋವ್‌ರ ದಾಖಲೆಯನ್ನು ಮುರಿದರು. 1985ರಲ್ಲಿ ತಮಗೆ 22 ವರ್ಷವಿದ್ದಾಗ ಕ್ಯಾಸ್ಪರೋವ್‌ ಮೊದಲ ಬಾರಿಗೆ ವಿಶ್ವ ಚಾಂಪಿಯನ್‌ ಆಗಿದ್ದರು. ಅವರು ರಷ್ಯಾದ ಮತ್ತೊಬ್ಬ ದಿಗ್ಗಜ ಅನಟೋಲಿ ಕಾರ್ಪೋವ್‌ರನ್ನು ಸೋಲಿಸಿ ಚಾಂಪಿಯನ್‌ ಪಟ್ಟಕ್ಕೇರಿದ್ದರು. ಕ್ಯಾಸ್ಪ್ರೋವ್‌ 6 ಬಾರಿ ವಿಶ್ವ ಚಾಂಪಿಯನ್‌ಶಿಪ್‌ ಗೆದ್ದಿದ್ದಾರೆ.

7ನೇ ವಯಸ್ಸಿನಲ್ಲಿ ಚೆಸ್ ಆರಂಭಿಸಿ 18ರಲ್ಲಿ ವಿಶ್ವ ಚಾಂಪಿಯನ್ ಕಿರೀಟ ತೊಟ್ಟ ಗುಕೇಶ್ ಯಾರು?

‘ವಿಶ್ವ ಚಾಂಪಿಯನ್‌’ ಹಾದಿ

* 2012-13ರಲ್ಲಿ 7 ವರ್ಷವಿದ್ದಾಗ ಚೆಸ್‌ ಆಡಲು ಆರಂಭಿಸಿದ ಗುಕೇಶ್‌.

* 2015ರಲ್ಲಿ ಅಂಡರ್‌-9 ವಿಭಾಗದಲ್ಲಿ ಏಷ್ಯನ್‌ ಶಾಲಾ ಚೆಸ್‌ ಚಾಂಪಿಯನ್‌ಶಿಪ್‌ ಚಾಂಪಿಯನ್‌.

* 2018ರಲ್ಲಿ ಅಂಡರ್‌-12 ವಿಭಾಗದಲ್ಲಿ ವಿಶ್ವ ಯೂತ್‌ ಚೆಸ್‌ ಚಾಂಪಿಯನ್‌, 5 ಚಿನ್ನದ ಪದಕ.

* 2017ರಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್‌ ಆಗಿ ಹೊರಹೊಮ್ಮಿದ ಗುಕೇಶ್‌.

* 2019ರಲ್ಲಿ 12 ವರ್ಷ 7 ತಿಂಗಳು, 17 ದಿನ ವಯಸ್ಸಿದ್ದಾಗ ಚೆಸ್‌ ಇತಿಹಾಸದಲ್ಲೇ 2ನೇ ಅತಿಕಿರಿಯ ಗ್ರ್ಯಾಂಡ್‌ ಮಾಸ್ಟರ್‌ ಆಗಿ ದಾಖಲೆ.

* 2023ರಲ್ಲಿ 2750 ಎಲೋ ರೇಟಿಂಗ್‌ (ವಿಶ್ವ ರ್‍ಯಾಂಕಿಂಗ್‌ಗೆ ಮಾನದಂಡ) ತಲುಪಿದ ವಿಶ್ವದ ಅತಿಕಿರಿಯ ಆಟಗಾರ ಎನ್ನುವ ಹೆಗ್ಗಳಿಕೆ.

* 2023ರಲ್ಲಿ ವಿಶ್ವನಾಥನ್‌ ಆನಂದ್‌ರನ್ನು ಹಿಂದಿಕ್ಕಿ ಭಾರತದ ಅಗ್ರ ಚೆಸ್‌ಪಟುವಾಗಿದ್ದ ಗುಕೇಶ್‌. 37 ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲಿಗ ಎನ್ನುವ ದಾಖಲೆ.

* 2023ರ ಡಿಸೆಂಬರ್‌ನಲ್ಲಿ ಕ್ಯಾಂಡಿಡೇಟ್ಸ್‌ ಟೂರ್ನಿಗೆ ಅರ್ಹತೆ. 2024ರ ಕ್ಯಾಂಡಿಡೇಟ್ಸ್‌ನಲ್ಲಿ ಗೆಲುವು. ಈ ಸಾಧನೆಗೈದ ವಿಶ್ವದ ಅತಿಕಿರಿಯ.

* 2024ರ ಸೆಪ್ಟೆಂಬರ್‌ನಲ್ಲಿ ಚೆಸ್‌ ಒಲಿಂಪಿಯಾಡ್‌ನಲ್ಲಿ ವೈಯಕ್ತಿಕ ಚಿನ್ನ. ಭಾರತ ತಂಡ ಚೊಚ್ಚಲ ಚಿನ್ನ ಗೆಲ್ಲಲು ನೆರವಾದ ಗುಕೇಶ್‌.

* 2024ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ವಿಶ್ವ ರ್‍ಯಾಂಕಿಂಗ್‌ನಲ್ಲಿ ಟಾಪ್‌-5 ಪ್ರವೇಶ.

* 2024ರ ಡಿಸೆಂಬರ್‌ 12ರಂದು ಮೊದಲ ಬಾರಿಗೆ ವಿಶ್ವ ಚಾಂಪಿಯನ್‌ ಪಟ್ಟ.