ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಒಲಿದ ಎರಡನೇ ಪದಕಭಾರತಕ್ಕೆ ಪದಕ ಗೆದ್ದುಕೊಟ್ಟ ಕನ್ನಡಿಗ ಗುರುರಾಜ ಪೂಜಾರಿ269 ಕೆಜಿ ಭಾರ ಎತ್ತಿ ಕಂಚಿನ ಪದಕ ಜಯಿಸಿದ ಕುಂದಾಪುರದ ಹುಡುಗ
ಬರ್ಮಿಂಗ್‌ಹ್ಯಾಮ್(ಜು.30): ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಭಾರತಕ್ಕೆ ಎರಡನೇ ಪದಕ ಗೆದ್ದುಕೊಡುವಲ್ಲಿ ಕನ್ನಡಿಗ ಗುರುರಾಜ ಪೂಜಾರಿ ಯಶಸ್ವಿಯಾಗಿದ್ದಾರೆ. ಪುರುಷರ 61 ಕೆ.ಜಿ. ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 269 ಕೆ.ಜಿ. ವೇಟ್‌ಲಿಫ್ಟ್ ಮಾಡುವ ಮೂಲಕ ಮತ್ತೊಮ್ಮೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೊದಲು 2018ರಲ್ಲಿ ನಡೆದ ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗುರುರಾಜ ಪೂಜಾರಿ ಬೆಳ್ಳಿ ಪದಕ ಜಯಿಸಿದ್ದರು.
ಆಸ್ಟ್ರೇಲಿಯಾದ ಗೋಲ್ಡ್’ಕೋಸ್ಟ್’ನಲ್ಲಿ ನಡೆದ 21ನೇ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 56 ಕೆ.ಜಿ ವಿಭಾಗದಲ್ಲಿ ಗುರುರಾಜ್ ಪೂಜಾರಿ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಭಾರತದ ಪರ ಮೊದಲ ದಿನವೇ ಪದಕದ ಖಾತೆ ತೆರೆದಿದ್ದರು. ಇದೀಗ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮತ್ತೊಮ್ಮೆ ಭಾರತದ ಕೀರ್ತಿ ಪತಾಕೆ ಹಾರಿಸುವಲ್ಲಿ ಕನ್ನಡದ ಕುವರ ಯಶಸ್ವಿಯಾಗಿದ್ದಾರೆ.
ಸ್ನ್ಯಾಚ್ ಸ್ಪರ್ಧೆಯಲ್ಲಿ ಮೊದಲ ಪ್ರಯತ್ನದಲ್ಲಿ 115 ಕೆ.ಜಿ ಭಾರ ಎತ್ತಿದ್ದ ಗುರುರಾಜ ಪೂಜಾರಿ, ಎರಡನೇ ಪ್ರಯತ್ನದಲ್ಲಿ 118 ಕೆಜಿ ಭಾರ ಎತ್ತಿದರು. ಆದರೆ ಮೂರನೆ ಸ್ನ್ಯಾಚ್‌ನಲ್ಲಿ 120 ಕೆ.ಜಿ. ಭಾರ ಎತ್ತಲು ವಿಫಲವಾದರು. ಇನ್ನು ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ ಗುರುರಾಜ ಪೂಜಾರಿ ಮೊದಲ ಪ್ರಯತ್ನದಲ್ಲಿ 144, ಎರಡನೇ ಪ್ರಯತ್ನದಲ್ಲಿ 148 ಹಾಗೂ ಮೂರನೇ ಪ್ರಯತ್ನದಲ್ಲಿ 151 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕವನ್ನು ಖಚಿತಪಡಿಸಿಕೊಂಡರು.
ಸುವರ್ಣ ನ್ಯೂಸ್ ಫಲಶೃತಿ: ವೇಟ್’ಲಿಫ್ಟರ್ ಗುರುರಾಜ್’ಗೆ ಬಹುಮಾನ ವಿತರಿಸಿದ ಸಿಎಂ
ಇದಕ್ಕೂ ಮೊದಲು ಪುರುಷರ 55 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಸಂಕೇತ್ ಸಾಗರ್ ಬೆಳ್ಳಿ ಪದಕ ಜಯಿಸುವ ಮೂಲಕ ಭಾರತಕ್ಕೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕದ ಖಾತೆ ತೆರೆದಿದ್ದರು. 21 ವರ್ಷದ ಮಹಾರಾಷ್ಟ್ರ ಮೂಲದ ವೇಟ್‌ಲಿಫ್ಟರ್ ಬರೋಬ್ಬರಿ 248 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು.
