Commonwealth Games 2022: ಬೆಳ್ಳಿ ಪದಕ ಗೆದ್ದ ಭಾರತ ಬ್ಯಾಡ್ಮಿಂಟನ್ ಮಿಶ್ರ ತಂಡ..!
* ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ಭಾರತ ಮಿಶ್ರ ಬ್ಯಾಡ್ಮಿಂಟನ್ ತಂಡ
* ಮಿಶ್ರ ಫೈನಲ್‌ನಲ್ಲಿ ಮಲೇಷ್ಯಾ ಎದುರು ಮುಗ್ಗರಿಸಿದ ಭಾರತ ಬ್ಯಾಡ್ಮಿಂಟನ್ ತಂಡ
* ಫೈನಲ್‌ನಲ್ಲಿ ಭಾರತ ಪರ ಸಿಂಧುಗೆ ಮಾತ್ರ ಜಯ, ಉಳಿದವರಿಗೆ ಸೋಲು
ಬರ್ಮಿಂಗ್‌ಹ್ಯಾಮ್(ಆ.02): ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಮಿಶ್ರ ವಿಭಾಗದಲ್ಲಿ ಭಾರತ ಎದುರು ಮಲೇಷ್ಯಾ ತಂಡವು 1-3 ಅಂತರದಲ್ಲಿ ಜಯಭೇರಿ ಬಾರಿಸುವ ಮೂಲಕ ಚಿನ್ನದ ಪದಕ ಜಯಿಸಿದರೇ, ಭಾರತ ಮಿಶ್ರ ತಂಡವು ಬೆಳ್ಳಿ ಪದಕಕ್ಕೆ ಕೊರಳೊಡ್ಡಿತು. ಮಂಗಳವಾರ ತಡರಾತ್ರಿ ನಡೆದ ಮಿಶ್ರ ಫೈನಲ್ ಪಂದ್ಯದಲ್ಲಿ ಭಾರತದ ತಾರಾ ಆಟಗಾರರಾದ ಕಿದಂಬಿ ಶ್ರೀಕಾಂತ್, ಸಾತ್ವಿಕ್‌ರಾಜ್ ರಂಕಿರೆಡ್ಡಿ, ಚಿರಾಗ್ ಶೆಟ್ಟಿ, ಗಾಯಿತ್ರಿ ಗೋಪಿಚಂದ್ ಮತ್ತು ಜೋಲಿ ತ್ರೀಸಾ ಜೋಡಿ ಸೋಲು ಅನುಭವಿಸಿದರು. ಪಿವಿ ಸಿಂಧು ಮಾತ್ರ 22-20, 21-17 ಗೇಮ್‌ಗಳಲ್ಲಿ ಗೆಲುವು ದಾಖಲಿಸಿದರು.
ಹಾಲಿ ಕಾಮನ್‌ವೆಲ್ತ್ ಚಾಂಪಿಯನ್ ಎನಿಸಿಕೊಂಡಿದ್ದ ಭಾರತ ತಂಡವು ಫೈನಲ್‌ನ ಮೊದಲ ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್ ತಮಗಿಂತ ಕಡಿಮೆ ಶ್ರೇಯಾಂಕ ಹೊಂದಿರುವ ತ್ಸಿ ಯಂಗ್ ನಿಗ್ ಎದುರು ಸೋಲು ಅನುಭವಿಸಿದರು. ಇದಾದ ಬಳಿಕ ಮಹಿಳಾ ಸಿಂಗಲ್ಸ್‌ನಲ್ಲಿ ಪಿವಿ ಸಿಂಧು ಗೆಲುವು ದಾಖಲಿಸುವ ಮೂಲಕ ಪಂದ್ಯ ಸಮಬಲ ಸಾಧಿಸುವಂತೆ ಮಾಡಿದರು. ಇದಾದ ಬಳಿಕ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಸೋಲು ಅನುಭವಿಸಿದರು. ಈ ಮೂಲಕ ಮಲೇಷ್ಯಾ ಚಿನ್ನದ ಪದಕ ಖಚಿತಪಡಿಸಿಕೊಂಡಿತು. 4 ವರ್ಷಗಳ ಹಿಂದೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಮಲೇಷ್ಯಾ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಶಾಟ್‌ಪುಟ್ ಫೈನಲ್‌ಗೆ ಮನ್‌ಪ್ರೀತ್ ಕೌರ್
ಭಾರತದ ಶಾಟ್‌ಪುಟ್ ಪಟು ಮನ್‌ಪ್ರೀತ್ ಕೌರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. 32 ವರ್ಷದ ಕೌರ್ ಅರ್ಹತಾ ಸುತ್ತಿನ ‘ಬಿ’ ಗುಂಪಿನಲ್ಲಿ 4ನೇ ಮತ್ತು ಒಟ್ಟಾರೆ 7ನೇ ಸ್ಥಾನ ಪಡೆದರು. ನೇರ ಅರ್ಹತೆಗೆ 18 ಮೀ. ದೂರಕ್ಕೆ ಎಸೆಯಬೇಕಿತ್ತು. ಆದರೆ ಕೌರ್ 16.78 ಮೀ. ಎಸೆದರು. ಅಗ್ರ 12 ಅಥ್ಲೀಟ್‌ಗಳು ಫೈನಲ್‌ಗೆ ಅರ್ಹತೆ ಪಡೆದರು. ಇದೇ ವೇಳೆ ಅಗ್ರ ಅಥ್ಲೀಟ್ ದ್ಯುತಿ ಚಂದ್ 100 ಮೀ. ಓಟದಲ್ಲಿ 11.55 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಒಟ್ಟಾರೆ 27ನೇ ಸ್ಥಾನ ಪಡೆದು ಹೊರಬಿದ್ದರು.
Commonwealth Games: ಟೇಬಲ್ ಟೆನಿಸ್ ತಂಡಕ್ಕೆ ಚಿನ್ನ, ಬೆಳ್ಳಿ ಭಾರ ಎತ್ತಿದ ವಿಕಾಸ್ ಠಾಕೂರ್!
ಲಾಂಗ್ ಜಂಪ್ ಫೈನಲ್‌ಗೆ ಶ್ರೀಶಂಕರ್, ಮೊಹಮದ್
ಭಾರತದ ಲಾಂಗ್ ಜಂಪ್ ಪಟುಗಳಾದ ಮುರಳಿ ಶ್ರೀಶಂಕರ್ ಮತ್ತು ಮೊಹಮದ್ ಅನೀಸ್ ಕಾಮನ್ವೆಲ್ತ್ ಗೇಮ್ಸ್‌ನ ಫೈನಲ್ ಪ್ರವೇಶಿಸಿದ್ದಾರೆ. ಅರ್ಹತಾ ಸುತ್ತಿನ ಮೊದಲ ಯತ್ನದಲ್ಲೇ 8.05 ಮೀ. ನೆಗೆದು ಶ್ರೀಶಂಕರ್ ಫೈನಲ್‌ನಲ್ಲಿ ಸ್ಥಾನ ಪಡೆದರು. ಅವರಿದ್ದ ಗುಂಪಿನಲ್ಲಿ ನೇರ ಅರ್ಹತೆಗೆ ನಿಗದಿಪಡಿಸಿದ್ದ 8 ಮೀ. ಗುರಿಯನ್ನು ದಾಟಿದ ಏಕೈಕ ಅಥ್ಲೀಟ್ ಎನ್ನುವುದು ವಿಶೇಷ. ಇನ್ನು ಮೊಹಮದ್ 7.68 ಮೀ. ಜಿಗಿದು ಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡರು.
ಈಜು: 5ನೇ ಸ್ಥಾನ ಪಡೆದ ರಾಜ್ಯದ ಶ್ರೀಹರಿ ನಟರಾಜ್
ಯುವ ಈಜುಪಟು ಶ್ರೀಹರಿ ನಟರಾಜ್ ಪುರುಷರ 50 ಮೀ.ಬ್ಯಾಕ್‌ಸ್ಟ್ರೋಕ್ ಫೈನಲ್‌ನಲ್ಲಿ 5ನೇ ಸ್ಥಾನ ಪಡೆದರು. ಇದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಈಜುಪಟುವಿನಿಂದ ದಾಖಲಾದ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದೆ. 25.23 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಶ್ರೀಹರಿ ಪದಕದಿಂದ ವಂಚಿತರಾದರು. 100 ಮೀ. ಬ್ಯಾಕ್‌ಸ್ಟ್ರೋಕ್‌ನ ಫೈನಲ್‌ನಲ್ಲಿ ಬೆಂಗಳೂರು ಈಜುಪಟು 7ನೇ ಸ್ಥಾನ ಪಡೆದಿದ್ದರು. ಇದೇ ವೇಳೆ 100 ಮೀ. ಬಟರ್‌ಫ್ಲೈ ವಿಭಾಗದ ಸ್ಪರ್ಧೆಯ ಫೈನಲ್‌ಗೇರಲು ಸಾಜನ್ ಪ್ರಕಾಶ್ ವಿಫಲರಾಗಿ ಕೂಟದಲ್ಲಿ ತಮ್ಮ ಅಭಿಯಾನ ಕೊನೆಗೊಳಿಸಿದರು.