ನವದೆಹಲಿ[ಜ.11]: ಖಾಸಗಿ ಟೀವಿ ಶೋನಲ್ಲಿ ಮಹಿಳೆಯರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿರುವ ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಕೆ.ಎಲ್. ರಾಹುಲ್'ರನ್ನು 2 ಏಕದಿನ ಪಂದ್ಯಗಳಿಗೆ ನಿಷೇಧಿಸಬೇಕು ಎಂದು ಗುರುವಾರ ಆಡಳಿತ ಸಮಿತಿ (ಸಿಒಎ) ಮುಖ್ಯಸ್ಥ ವಿನೋದ್ ರಾಯ್ ಬಿಸಿಸಿಐಗೆ ಶಿಫಾರಸು ಮಾಡಿದ್ದಾರೆ. ಆದರೆ ಸಿಒಎ ಸಮಿತಿ ಸದಸ್ಯೆ ಡಯಾನಾ ಎಡುಲ್ಜಿ, ಈ ವಿಷಯಕ್ಕೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಲು ಬಿಸಿಸಿಐನ ಕಾನೂನು ಸಮಿತಿಗೆ ಒಪ್ಪಿಸಿದ್ದಾರೆ. 

ಪಾಂಡ್ಯ ಕಾಮೋತ್ತೇಜಕ ಹೇಳಿಕೆ: ಯಾಕಪ್ಪಾ ಅಂದೆ ಎಂದು ಕೇಳಿದ ಬಿಸಿಸಿಐ

ಬುಧವಾರ ರಾಯ್ ನೇತೃತ್ವದ ಸಮಿತಿ ಈ ಇಬ್ಬರಿಗೂ ಶೋಕಾಸ್ ನೋಟಿಸ್ ನೀಡಿತ್ತು. ‘ಹಾರ್ದಿಕ್ ಪಾಂಡ್ಯ, ನೋಟಿಸ್‌ಗೆ ನೀಡಿರುವ ವಿವರಣೆ ನನಗೆ ಒಪ್ಪಿಗೆಯಾಗಿಲ್ಲ. ಹೀಗಾಗಿ ನಾನು ಇಬ್ಬರೂ ಆಟಗಾರರನ್ನು ಮುಂದಿನ 2 ಏಕದಿನ ಪಂದ್ಯಗಳಿಗೆ ನಿಷೇಧಿಸಲು ಶಿಫಾರಸು ಮಾಡಿದ್ದೇನೆ. ಅಲ್ಲದೆ ಸದಸ್ಯೆ ಡಯಾನಾ ಎಡುಲ್ಜಿ ಒಪ್ಪಿಗೆ ಸೂಚಿಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ವಿನೋದ್ ರಾಯ್ ಹೇಳಿದ್ದಾರೆ.

ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಾರ್ದಿಕ್ ಪಾಂಡ್ಯ ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ. ಕರಣ್ ಜೋಹರ್ ನಡೆಸಿಕೊಡುವ ಟಾಕ್ ಶೋದಲ್ಲಿ ಕೆ.ಎಲ್ ರಾಹುಲ್ ಕೂಡಾ ಭಾಗವಹಿಸಿದ್ದರು.