ಲಾರ್ಡ್ಸ್[ಆ.12]: ಇಂಗ್ಲೆಂಡ್ ನೆಲದಲ್ಲಿ ಭಾರತ ತಿರುಗೇಟು ನೀಡಲು ಮತ್ತೊಮ್ಮೆ ವಿಫಲವಾಗಿದೆ. ಮಳೆಯ ಕಣ್ಣಾಮುಚ್ಚಾಲೆ ಆಟದ ನಡುವಿಯೂ ಮೂರನೇ ದಿನದಂತ್ಯಕ್ಕೆ ಇಂಗ್ಲೆಂಡ್ ಪಡೆ 6 ವಿಕೆಟ್ ಕಳೆದುಕೊಂಡು 357 ರನ್ ಬಾರಿಸಿದ್ದು ಒಟ್ಟು 250 ರನ್’ಗಳ ಭರ್ಜರಿ ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಸ್ಪಷ್ಟ ಬಿಗಿ ಹಿಡಿತ ಸಾಧಿಸಿದೆ.

ಕ್ರಿಸ್ ವೋಕ್ಸ್ ಚೊಚ್ಚಲ ಶತಕ ಹಾಗೂ ಜಾನಿ ಬೈರ್’ಸ್ಟೋ ಆಕರ್ಷಕ ಬ್ಯಾಟಿಂಗ್ ಪಂದ್ಯದ ದಿಕ್ಕನ್ನೇ ಬದಲಿಸಿದೆ. ಮೂರನೇ ದಿನದಾಟದಲ್ಲಿ ಕ್ರಿಸ್ ವೋಕ್ಸ್, ಇಶಾಂತ್ ಶರ್ಮಾ, ಓಲ್ಲಿ ಪೋಪ್ಸ್ ಸೇರಿದಂತೆ ಹಲವು ಕ್ರಿಕೆಟಿಗರು ಕೆಲವು ದಾಖಲೆ ನಿರ್ಮಿಸಿದ್ದಾರೆ. ಯಾವ ದಾಖಲೆಗಳು ಯಾರ ಹೆಸರಿಗೆ ಇಲ್ಲಿದೆ ಡೀಟೇಲ್ಸ್..

1. ಕ್ರಿಸ್ ವೋಕ್ಸ್: ಇಂಗ್ಲೆಂಡ್ ಆಲ್ರೌಂಡರ್ ಪಾಲಿಗೆ ಲಾರ್ಡ್ಸ್ ಅಂಗಳ ಲಕ್ಕಿ ಮೈದಾನ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ. ವೋಕ್ಸ್ ತಮ್ಮ ಚೊಚ್ಚಲ ಅರ್ಧಶತಕ, ಶತಕ, ಇನ್ನಿಂಗ್ಸ್’ವೊಂದರಲ್ಲಿ 5 ವಿಕೆಟ್ ಹಾಗೂ ಟೆಸ್ಟ್’ವೊಂದರಲ್ಲಿ 10 ವಿಕೆಟ್ ಈ ಎಲ್ಲಾ ಚೊಚ್ಚಲ ಸಾಧನೆ ಮಾಡಿದ್ದು ಲಾರ್ಡ್ಸ್ ಮೈದಾನದಲ್ಲಿ. 2016ರಲ್ಲಿ ಶ್ರೀಲಂಕಾ ವಿರುದ್ಧ[66] ಚೊಚ್ಚಲ ಅರ್ಧಶತಕ ಬಾರಿಸಿದ್ದು, ಅದೇ ವರ್ಷ ಪಾಕಿಸ್ತಾನ ವಿರುದ್ಧ ಇನ್ನಿಂಗ್ಸ್’ವೊಂದರಲ್ಲಿ 70/6 ಹಾಗೂ 32/5 ವಿರುದ್ಧ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದರು.

5. ತವರಿನ ಮೈದಾನವೊಂದರಲ್ಲಿ ಶತಕ ಹಾಗೂ 10 ವಿಕೆಟ್ ಕಬಳಿಸಿದ ಜಗತ್ತಿನ 5ನೇ ಕ್ರಿಕೆಟಿಗ ಎನ್ನುವ ಗೌರವಕ್ಕೆ ವೋಕ್ಸ್ ಪಾತ್ರರಾಗಿದ್ದಾರೆ. ಈ ಮೊದಲು ಇಂಗ್ಲೆಂಡ್’ನ ಸರ್ ಗ್ಯಾರಿ ಅಲನ್, ಸರ್ ಇಯಾಮ್ ಬೋಥಮ್, ಸ್ಟುವರ್ಟ್ ಬ್ರಾಡ್ ಹಾಗೂ ಆಸ್ಟ್ರೇಲಿಯಾದ ಕೆನಿತ್ ಮಿಲ್ಲರ್ ಈ ಸಾಧನೆ ಮಾಡಿದ್ದರು. ಇನ್ನು ಲಾರ್ಡ್ಸ್ ಮೈದಾನವೊಂದರಲ್ಲೇ 9 ಕ್ರಿಕೆಟಿಗರು ಶತಕ ಹಾಗೂ 10 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.

32. ಇಶಾಂತ್ ಶರ್ಮಾ ಇಂಗ್ಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್’ನಲ್ಲಿ ಒಂದು ವಿಕೆಟ್ ಕಬಳಿಸುವುದರೊಂದಿಗೆ ಒಟ್ಟು 32 ವಿಕೆಟ್ ವಿಕೆಟ್ ಕಬಳಿಸಿದ ಸಾಧನೆ ಮಾಡಿದರು. ಈ ಮೂಲಕ ಇಂಗ್ಲೆಂಡ್ ವಿರುದ್ಧ ಗರಿಷ್ಠ ವಿಕೆಟ್ ಪಡೆದ ಭಾರತದ 4ನೇ ಬೌಲರ್ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಈ ಪಟ್ಟಿಯಲ್ಲಿ ಕಪಿಲ್ ದೇವ್[43], ಅನಿಲ್ ಕುಂಬ್ಳೆ[36] ಹಾಗೂ ಬಿಎಸ್ ಬೇಡಿ[35] ಮೊದಲ ಮೂರು ಸ್ಥಾನದಲ್ಲಿದ್ದಾರೆ.

120*. ಲಾರ್ಡ್ಸ್ ಮೈದಾನದಲ್ಲಿ ನಂ.7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್’ಗಿಳಿದು ಗರಿಷ್ಠ ರನ್ ಸಿಡಿಸಿದ 120* ಬ್ಯಾಟ್ಸ್’ಮನ್ ಎನ್ನುವ ದಾಖಲೆಯನ್ನು ಕ್ರಿಸ್ ವೋಕ್ಸ್ ಬರೆದಿದ್ದಾರೆ.

1999- ಯುವ ಕ್ರಿಕೆಟಿಗ ಓಲ್ಲಿ ಪೋಪ್ ಟೆಸ್ಟ್ ಪದಾರ್ಪಣೆ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್’ಗಿಳಿದರು. ಈ ಮೂಲಕ ಮೈಕಲ್ ವಾನ್[1999] ಬಳಿಕ ಟೆಸ್ಟ್ ಪದಾರ್ಪಣಾ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಬ್ಯಾಟ್ಸ್’ಮನ್ ಎನ್ನುವ ಖ್ಯಾತಿಗೆ ಪೋಪ್ ಪಾತ್ರರಾಗಿದ್ದಾರೆ.