ತೀರ್ಪು ಹೊರ ಬೀಳುತ್ತಿದ್ದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಗೇಲ್, ಕೊನೆಗೂ ನನಗೆ ನ್ಯಾಯ ಸಿಕ್ಕಿದ್ದಕ್ಕೆ ಸಂತೋಷವಾಗುತ್ತಿದೆ. ನಾನು ಯಾವುದೇ ತಪ್ಪೆಸಗಿಲ್ಲ, ಹಾಗಾಗಿ ನನಗೆ ಯಾವ ಪಾಪಪ್ರಜ್ಞೆಯೂ ಕಾಡುತ್ತಿಲ್ಲ ಎಂದಿದ್ದಾರೆ.
ಸಿಡ್ನಿ(ಅ.30): ಮಸಾಜ್ ಥೆರಪಿಸ್ಟ್ ಜೊತೆ ಅಸಭ್ಯವಾಗಿ ವರ್ತಿಸಿದ ಪ್ರಕರಣದ ಕುರಿತಂತೆ ಆಸ್ಟ್ರೇಲಿಯಾ ಮಾಧ್ಯಮಗಳ ವಿರುದ್ಧ ಕ್ರಿಸ್ ಗೇಲ್ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ಆಸೀಸ್ ನ್ಯಾಯಾಲಯ ಪುರಸ್ಕರಿಸಿದೆ.
2015ರ ವಿಶ್ವಕಪ್ ವೇಳೆ ಮಹಿಳಾ ಮಸಾಜ್ ಥೆರಪಿಸ್ಟ್'ವೊಬ್ಬರು ಕ್ರಿಸ್ ಗೇಲ್ ಇದ್ದ ಕೊಠಡಿ ಪ್ರವೇಶಿಸಿದ್ದರು. ಈ ವೇಳೆ ಗೇಲ್ ತಮ್ಮ ಗುಪ್ತಾಂಗ ತೋರಿಸಿದ್ದರು ಎಂದು ಆ ಮಹಿಳೆ ಆರೋಪಿಸಿದ್ದಳು. ಇದನ್ನೇ ಆಧಾರವಾಗಿಟ್ಟುಕೊಂಡು ಆಸೀಸ್ ಮಾಧ್ಯಮಗಳಾದ ಫೇರ್'ಪಾಕ್ಸ್ ಮೀಡಿಯಾ ನ್ಯೂಸ್ ಪೇಪರ್, ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್, ದಿ ಏಜ್ ಮತ್ತು ಕ್ಯಾನ್'ಬೆರಾ ಟೈಮ್ಸ್ ಪತ್ರಿಕೆಗಳು ಗೇಲ್ ವಿರುದ್ಧ ಸರಣಿ ಲೇಖನಗಳನ್ನು ಪ್ರಕಟಿಸಿದ್ದವು.
ಈ ಕುರಿತು ವಿಚಾರಣೆ ನಡೆಸಿದ ನ್ಯೂ ಸೌಥ್ ವೇಲ್ಸ್ ಸುಪ್ರೀಂ ಕೋರ್ಟ್ ಗೇಲ್ ಅಸಭ್ಯವಾಗಿ ವರ್ತಿಸಿರುವ ಕುರಿತಂತೆ ಸೂಕ್ತ ಸಾಕ್ಷಿಗಳಿಲ್ಲ. ಇದು ಮೇಲ್ನೋಟಕ್ಕೆ ಗೇಲ್ ಚಾರಿತ್ರ್ಯವಧೆ ಮಾಡುವ ಯತ್ನದಂತೆ ಕಾಣಿಸುತ್ತಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ತೀರ್ಪು ಹೊರ ಬೀಳುತ್ತಿದ್ದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಗೇಲ್, ಕೊನೆಗೂ ನನಗೆ ನ್ಯಾಯ ಸಿಕ್ಕಿದ್ದಕ್ಕೆ ಸಂತೋಷವಾಗುತ್ತಿದೆ. ನಾನು ಯಾವುದೇ ತಪ್ಪೆಸಗಿಲ್ಲ, ಹಾಗಾಗಿ ನನಗೆ ಯಾವ ಪಾಪಪ್ರಜ್ಞೆಯೂ ಕಾಡುತ್ತಿಲ್ಲ ಎಂದಿದ್ದಾರೆ.