80ರ ದಶಕದ ಟೆಸ್ಟ್ ಕ್ರಿಕೆಟ್ ನೆನಪಿಸುವಂತೆ ಬ್ಯಾಟ್ ಬೀಸಿದ ಚೇತೇಶ್ವರ ಪೂಜಾರ 525 ಎಸೆತಗನ್ನು ಎದುರಿಸಿ ವೃತ್ತಿ ಜೀವನದ ಮೂರನೇ ದ್ವಿಶತಕ ಸಿಡಿಸಿ ತಂಡಕ್ಕೆ ಆಧಾರವಾದರು.
ರಾಂಚಿ(ಮಾ): ಚೇತೇಶ್ವರ ಪೂಜಾರ ದ್ವಿಶತಕ(202), ವೃದ್ದಿಮಾನ್ ಸಾಹ(117) ಶತಕದ ನೆರವಿನಿಂದ ಟೀಂ ಇಂಡಿಯಾ ಮೊದಲ ಇನಿಂಗ್ಸ್'ನಲ್ಲಿ 609 ರನ್'ಗಳ ಬೃಹತ್ ಮೊತ್ತ ಕಲೆಹಾಕಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಕೊಹ್ಲಿ ಪಡೆ 152 ರನ್'ಗಳ ಮುನ್ನಡೆ ಸಾಧಿಸಿದೆ. ಇನ್ನು ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 23 ರನ್'ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
91 ರನ್'ಗಳ ಹಿನ್ನೆಡೆಯೊಂದಿಗೆ ನಾಲ್ಕನೇ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ದಿಟ್ಟ ಹೆಜ್ಜೆಯನ್ನೇ ಇಟ್ಟಿತು. 80ರ ದಶಕದ ಟೆಸ್ಟ್ ಕ್ರಿಕೆಟ್ ನೆನಪಿಸುವಂತೆ ಬ್ಯಾಟ್ ಬೀಸಿದ ಚೇತೇಶ್ವರ ಪೂಜಾರ 525 ಎಸೆತಗನ್ನು ಎದುರಿಸಿ ವೃತ್ತಿ ಜೀವನದ ಮೂರನೇ ದ್ವಿಶತಕ ಸಿಡಿಸಿ ತಂಡಕ್ಕೆ ಆಧಾರವಾದರು. ಇನ್ನು ಚುರುಕಿನ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ವೃದ್ದಿಮಾನ್ ಸಾಹ ಕೂಡ ವೃತ್ತಿ ಜೀವನದ ಮೂರನೇ ಶತಕ ಸಿಡಿಸಿ ಮಿಂಚಿದರು. ಇನ್ನು ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ ರವೀಂದ್ರ ಜಡೇಜಾ ಕೇವಲ 55 ಎಸೆತಗಳಲ್ಲಿ 54 ರನ್ ಸಿಡಿಸಿದರು. ಒಟ್ಟಾರೆ ಟೀಂ ಇಂಡಿಯಾ 603/9 ರನ್'ಗಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾಕ್ಕೆ ಜಡೇಜಾ ಮತ್ತೊಮ್ಮೆ ಕಂಟಕವಾಗಿ ಪರಿಣಮಿಸಿದರು. ವೇಗವಾಗಿ ರನ್ ಕಲೆಹಾಕುತ್ತಿದ್ದ ಡೇವಿಡ್ ವಾರ್ನರ್(14) ಅವರನ್ನು ಬೌಲ್ಡ್ ಮಾಡಿ ಮೊದಲ ಯಶಸ್ಸು ದೊರಕಿಸಿಕೊಟ್ಟರು. ನಂತರ ಆಡಲಿಳಿದ ನೈಟ್'ವಾಚ್'ಮ್ಯಾನ್ ಕೇವಲ 2 ರನ್'ಗಳಸಿ ಜಡೇಜಾಗೆ ಎರಡನೇ ಬಲಿಯಾದರು. ಇನ್ನೂ 129 ರನ್ ಹಿನ್ನೆಡೆಯಲ್ಲಿರುವ ಆಸೀಸ್ ಬಹುತೇಕ ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಪಿಚ್ ತಿರುವು ಪಡೆದುಕೊಳ್ಳುತ್ತಿರುವ ಲಕ್ಷಣಗಳು ಗೋಚರಿಸುತ್ತಿದ್ದು ಐದನೇ ದಿನದ ಪಂದ್ಯ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್: 451/10
ಭಾರತ ಮೊದಲ ಇನಿಂಗ್ಸ್: 603/9 ಡಿಕ್ಲೇರ್
ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್: 23/2
