Chess Olympiad: ಪದಕ ಗೆದ್ದ ಭಾರತ ತಂಡಗಳಿಗೆ ಬಂಪರ್ ಬಹುಮಾನ ಘೋಷಿಸಿದ ಎಂಕೆ ಸ್ಟಾಲಿನ್

* 44ನೇ ಚೆಸ್ ಒಲಿಂಪಿಯಾಡ್‌ ಕ್ರೀಡಾಕೂಟ ಯಶಸ್ವಿಯಾಗಿ ಮುಕ್ತಾಯ
* ಕಂಚಿನ ಪದಕ ಗೆದ್ದ ಭಾರತ ಪುರುಷ ಹಾಗೂ ಮಹಿಳಾ ಚೆಸ್ ತಂಡಗಳು
* ಪದಕ ಗೆದ್ದ ಭಾರತ ತಂಡಕ್ಕೆ ಬಂಪರ್ ಬಹುಮಾನ ಘೋಷಿಸಿದ ತಮಿಳುನಾಡು ಸಿಎಂ ಸ್ಟಾಲಿನ್

Chess Olympiad Tamil Nadu CM MK Stalin Announces Rs 1 Crore Prize For Indian Teams That Won Bronze kvn

ಚೆನ್ನೈ(ಆ.10): 44ನೇ ಚೆಸ್ ಒಲಿಂಪಿಯಾಡ್‌ ಕ್ರೀಡಾಕೂಟದಲ್ಲಿ ಭಾರತ ಪುರುಷರ 'ಬಿ' ತಂಡ ಹಾಗೂ ಭಾರತ ಮಹಿಳಾ 'ಎ' ತಂಡ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಮಹಾಬಲಿಪುರಂನಲ್ಲಿ ನಡೆದ ಚೆಸ್‌ ಒಲಿಂಪಿಯಾಡ್‌ನಲ್ಲಿ ಪದಕ ಗೆದ್ದ ಭಾರತದ ತಂಡಗಳಿಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ತಲಾ ಒಂದು ಕೋಟಿ ರುಪಾಯಿ ಬಹುಮಾನ ಘೋಷಿಸಿದ್ದಾರೆ. ತಮಿಳುನಾಡು ಸರ್ಕಾರದ ಸಹಯೋಗದಲ್ಲಿ ನಡೆದ ಅಂತರರಾಷ್ಟ್ರೀಯ ಒಳಾಂಗಣ ಕ್ರೀಡಾಕೂಟವು ಯಶಸ್ವಿಯಾಗಿ ಆಯೋಜನೆಗೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.

FIDE ಚೆಸ್ ಒಲಿಂಪಿಯಾಡ್ ಕ್ರೀಡಾಕೂಟವು ಚೆನ್ನೈ ಸಮೀಪದ ಮಹಾಬಲಿಪುರಂನಲ್ಲಿ ಜುಲೈ 28ರಿಂದ ಆರಂಭವಾಗಿತ್ತು. ಮುಕ್ತ(ಪುರುಷರ) ವಿಭಾಗದಲ್ಲಿ ಭಾರತ ‘ಬಿ’ ತಂಡ ಕಂಚು ಗೆದ್ದರೆ, ಮಹಿಳಾ ವಿಭಾಗದಲ್ಲಿ ಭಾರತ ‘ಎ’ ತಂಡ ಸಹ 3ನೇ ಸ್ಥಾನ ಪಡೆಯಿತು.  ಮುಕ್ತ ವಿಭಾಗದ 11ನೇ ಹಾಗೂ ಅಂತಿಮ ಸುತ್ತಿನಲ್ಲಿ ಭಾರತ ‘ಬಿ’ ತಂಡ ಜರ್ಮನಿ ವಿರುದ್ಧ 3-1ರಲ್ಲಿ ಗೆದ್ದು 3ನೇ ಸ್ಥಾನ ಪಡೆಯಿತು. ಇನ್ನುಳಿದಂತೆ ಉಜ್ಬೇಕಿಸ್ತಾನ ಚಿನ್ನ ಗೆದ್ದರೆ, ಅರ್ಮೇನಿಯಾ ಬೆಳ್ಳಿ ಪದಕ ಜಯಿಸಿತು. 

ಇನ್ನು ಮಹಿಳಾ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಭಾರತ ‘ಎ’ ತಂಡ 11ನೇ ಹಾಗೂ ಕೊನೆಯ ಸುತ್ತಿನಲ್ಲಿ ಅಮೆರಿಕ ವಿರುದ್ಧ 1-3ರಲ್ಲಿ ಸೋತು ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು. ಕೊನೆರು ಹಂಪಿ ನೇತೃತ್ವದ ಭಾರತ ಮಹಿಳಾ ಚೆಸ್‌ ತಂಡವು 3ನೇ ಸ್ಥಾನ ಪಡೆಯಿತು. 

Chess Olympiad ಭಾರತದ ಪಾಲಾದ 2 ಕಂಚಿನ ಪದಕ

ಭಾರತ ಚೆಸ್‌ ತಂಡದ ಪ್ರದರ್ಶನದ ಕುರಿತಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹರ್ಷ ವ್ಯಕ್ತಪಡಿಸಿದ್ದು, ಚೆಸ್‌ ಒಲಿಂಪಿಯಾಡ್‌ನಲ್ಲಿ ಪದಕ ಗೆಲ್ಲುವ ಮೂಲಕ ಇಡೀ ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ ಭಾರತದ ಎರಡೂ ತಂಡಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮಿಳುನಾಡು ಸರ್ಕಾರದ ವತಿಯಿಂದ ಪದಕ ಗೆದ್ದ ಭಾರತದ ಎರಡೂ ತಂಡಗಳಿಗೆ ತಲಾ ಒಂದು ಕೋಟಿ ರುಪಾಯಿ ನಗದು ಬಹುಮಾನ ನೀಡಿ ಗೌರವಿಸುವುದಾಗಿ ಸ್ಟಾಲಿನ್ ತಿಳಿಸಿದ್ದಾರೆ. 

ಚೆಸ್ ಒಲಿಂಪಿಯಾಡ್ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಟಾರ್ಚ್‌ ರಿಲೇಯನ್ನು ಪರಿಚಯಿಸಲಾಗಿತ್ತು. 187 ರಾಷ್ಟ್ರ ಗಳ ಆಟಗಾರರು ಕೂಟದಲ್ಲಿ ಪಾಲ್ಗೊಂಡಿದ್ದರು. 

Latest Videos
Follow Us:
Download App:
  • android
  • ios