ಬ್ರಿಜ್ ವಿರುದ್ಧ ಜಾರ್ಜ್ಶೀಟ್: 6 ಮಂದಿ ಮೇಲೆ ಲೈಂಗಿಕ ಕಿರುಕುಳ ತನಿಖೆಯಿಂದ ಸಾಬೀತು..!
ಕೋರ್ಟ್‌ಗೆ 1000 ಪುಟಗಳ ಚಾಜ್‌ರ್‍ಶೀಟ್ ಸಲ್ಲಿಸಿದ ದೆಹಲಿ ಪೊಲೀಸರು
ಸಾಕ್ಷ್ಯಾಧಾರ ಕೊರತೆ ಹಿನ್ನೆಲೆ, ಅಪ್ರಾಪ್ತೆಯ ತಂದೆ ಹೇಳಿಕೆ ಬದಲು
ಪೋಕ್ಸೋ ಕೇಸ್ ರದ್ದುಗೊಳಿಸುವಂತೆ ಪೊಲೀಸರಿಂದ ನ್ಯಾಯಾಲಯಕ್ಕೆ ಶಿಫಾರಸು
ನವದೆಹಲಿ(ಜೂ.16): ದೇಶದ ಅಗ್ರ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಸೇರಿದಂತೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್ಐ)ದ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಗುರುವಾರ 1000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.
ಕುಸ್ತಿಪಟುಗಳ ಮೇಲೆ ಬ್ರಿಜ್ ಲೈಂಗಿಕ ಕಿರುಕುಳ ಎಸೆಗಿದ್ದಾರೆ ಎನ್ನುವುದು ದೆಹಲಿ ಪೊಲೀಸರ ತನಿಖೆಯಲ್ಲಿ ಸಾಬೀತಾಗಿದೆಯಾದರೂ, ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಕ್ಕೆ ದೃಢವಾದ ಸಾಕ್ಷ್ಯಾಧಾರ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬ್ರಿಜ್‌ಭೂಷಣ್ ವಿರುದ್ಧದ ಫೋಕ್ಸೋ ಕೇಸ್ ರದ್ದುಗೊಳಿಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಶಿಫಾರಸು ಮಾಡಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ಅಪ್ರಾಪ್ತೆ ಸೇರಿದಂತೆ 7 ಮಂದಿ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬ್ರಿಜ್‌ಭೂಷಣ್ ವಿರುದ್ಧ ಪೋಕ್ಸೋ ಸೇರಿ 2 ಎಫ್ಐಆರ್ ದಾಖಲಿಸಿದ್ದರು. ಈ ಬಗ್ಗೆ 5 ದೇಶಗಳಲ್ಲಿ ನಡೆದಿದ್ದ ಕುಸ್ತಿ ಕೂಟಗಳ ವೇಳೆ ದಾಖಲಾಗಿದ್ದ ಸಿಸಿಟೀವಿ ದೃಶ್ಯಗಳ ಪರಿಶೀಲನೆ, ಕುಸ್ತಿಪಟುಗಳು, ರೆಫ್ರಿ ಹಾಗೂ ಕೋಚ್ಗಳು ಸೇರಿದಂತೆ 180ಕ್ಕೂ ಹೆಚ್ಚು ಮಂದಿಯ ಹೇಳಿಕೆ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಪೂರ್ಣಗೊಳಿಸಿ ದೆಹಲಿ ಮ್ಯಾಜಿಸ್ಪ್ರೇಟ್ ಕೋರ್ಚ್‌ಗೆ ದೋಷಾರೋಪ ಪಟ್ಟಿಸಲ್ಲಿಸಿದ್ದಾರೆ.
ವಿವಿಧ ಸೆಕ್ಷನ್ಗಳಡಿ ಚಾರ್ಜ್‌ಶೀಟ್
ಬ್ರಿಜ್ ವಿರುದ್ಧ ಪೋಕ್ಸೋ ಕೇಸ್ ರದ್ದುಗೊಳಿಸಲು ಶಿಫಾರಸು ಮಾಡಲಾಗಿದ್ದರೂ ಇತರರ ದೂರುಗಳಿಗೆ ಸಂಬಂಧಿಸಿದಂತೆ ವಿವಿಧ ಸೆಕ್ಷನ್ಗಳಡಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಐಪಿಸಿ 354(ಮಹಿಳೆಯರ ಮೇಲೆ ಹಲ್ಲೆ), 354ಎ(ಲೈಂಗಿಕ ಕಿರುಕುಳ), 354ಡಿ(ಹಿಂಬಾಲಿಸುವಿಕೆ) ಹಾಗೂ 506(ಬೆದರಿಕೆ) ಸೆಕ್ಷನ್‌ಗಳ ಅಡಿಯಲ್ಲಿ ದೋಷಾರೋಪ ಪಟ್ಟಿಸಲ್ಲಿಸಲಾಗಿದೆ. ಇದರ ಜೊತೆಗೆ ಈಗಾಗಲೇ ಅಮನತುಗೊಂಡಿರುವ ಡಬ್ಲ್ಯುಎಫ್ಐನ ಹೆಚ್ಚುವರಿ ಕಾರ್ಯದರ್ಶಿ ವಿನೋದ್ ತೋಮರ್ ವಿರುದ್ಧ ಐಪಿಸಿ 109, 354, 354ಎ ಹಾಗೂ 506 ಸೆಕ್ಷನ್ಗಳಡಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.
ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ಭೂಷಣ್ ವಿರುದ್ಧ ಇಂದು ಚಾರ್ಜ್‌ಶೀಟ್?
ಜು.22ಕ್ಕೆ ವಿಚಾರಣೆ: ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್ ಅನ್ನು ಪರಿಗಣಿಸುವ ಬಗ್ಗೆ ಜೂ.22ರಂದು ಮ್ಯಾಜಿಸ್ಪ್ರೇಟ್ ಕೋರ್ಚ್‌ನಲ್ಲಿ ವಿಚಾರಣೆ ನಡೆಯಲಿದೆ. ಅಂದು ನ್ಯಾಯಾಧೀಶರು ತನಿಖೆಯ ಸಾರಾಂಶವನ್ನು ಪರಿಶೀಲಿಸಿ ಚಾರ್ಜ್‌ಶೀಟ್ ಅನ್ನು ಪರಿಗಣಿಸಬಹುದು ಅಥವಾ ಹೆಚ್ಚಿನ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಬಹುದಾಗಿದೆ.
ಬ್ರಿಜ್ ವಿರುದ್ಧ ದಾಖಲಾಗಿದ್ದ ಪೋಕ್ಸೋ ಕೇಸ್ ರದ್ದು ಏಕೆ?
ಅಪ್ರಾಪ್ತೆಯ ದೂರಿನಂತೆ ಬ್ರಿಜ್‌ಭೂಷಣ್ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ಕೈಗೆತ್ತಿಕೊಂಡು ಹಲವು ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಆದರೆ ಇತ್ತೀಚೆಗೆ ದೂರುದಾರ ಅಪ್ರಾಪ್ತೆಯ ತಂದೆಯೇ ತಾವು ಸಿಟ್ಟಿನಲ್ಲಿ ಸುಳ್ಳು ಮಾಹಿತಿ ನೀಡಿದ್ದಾಗಿ ಸ್ಪಷ್ಟೀಕರಣ ನೀಡಿದ್ದರು. ಅಪ್ರಾಪ್ತೆಯೂ ತಾವು ಮೊದಲು ನೀಡಿದ್ದ ಹೇಳಿಕೆಯನ್ನು ಬದಲಿಸಿದ್ದರು. ಇದರ ಜೊತೆಗೆ ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕುಳವಾಗಿದೆ ಎನ್ನುವುದಕ್ಕೆ ಪೂರಕ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ಪೋಕ್ಸೋ ಕೇಸ್ ರದ್ದುಪಡಿಸುವಂತೆ ದೆಹಲಿ ಸೆಷನ್ಸ್ ನ್ಯಾಯಾಲಯಕ್ಕೆ ಶಿಫಾರಸು ಮಾಡಿದ್ದಾರೆ. ಈ ಸಂಬಂಧ ಜು.4ರಂದು ವಿಚಾರಣೆ ನಡೆಯಲಿದೆ. ಒಂದು ವೇಳೆ ಪೋಕ್ಸೋ ಕೇಸ್‌ನಲ್ಲಿ ಆರೋಪ ಸಾಬೀತಾದರೆ ಕನಿಷ್ಠ 3 ವರ್ಷ ಜೈಲು ಶಿಕ್ಷೆಯಾಗಲಿದೆ.
ಚರ್ಚಿಸಿ ಮುಂದಿನ ನಿರ್ಧಾರ: ರೆಸ್ಲರ್ಸ್
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದ ಹಲವು ಭರವಸೆ ಬಳಿಕ ತಮ್ಮ ಹೋರಾಟಕ್ಕೆ ಜೂ.15ರ ವರೆಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದ ಕುಸ್ತಿಪಟುಗಳು, ಹೋರಾಟ ಮತ್ತೆ ಆರಂಭಿಸಬೇಕೇ ಬೇಡವೇ ಎಂಬುದರ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಸಾಕ್ಷಿ ಮಲಿಕ್ ಪತಿ, ಕುಸ್ತಿಪಟು ಸತ್ಯವರ್ತ್ ಪ್ರತಿಕ್ರಿಯಿಸಿದ್ದು, ‘ನಾವು ಈ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದೇವೆ. ಮುಂದಿನ ನಿರ್ಧಾರ ಶೀಘ್ರವೇ ಪ್ರಕಟಿಸುತ್ತೇವೆ’ ಎಂದಿದ್ದಾರೆ.
ಭಾರತೀಯ ಕ್ರೀಡೆಯ ಕರಾಳ ದಿನ: ಕಾಂಗ್ರೆಸ್ ಕಿಡಿ
ಬ್ರಿಜ್ ವಿರುದ್ಧದ ಪೋಕ್ಸೋ ಪ್ರಕರಣ ರದ್ದುಗೊಳಿಸಲು ಪೊಲೀಸರು ಶಿಫಾರಸು ಮಾಡಿರುವುದಕ್ಕೆ ಕಾಂಗ್ರೆಸ್ ಕಿಡಿಕಾರಿದ್ದು, ಇದು ಭಾರತೀಯ ಕ್ರೀಡೆಯ ಕರಾಳ ದಿನ ಎಂದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ‘ಹೆಣ್ಮಕ್ಕಳನ್ನು ರಕ್ಷಿಸಿ, ಹೆಣ್ಮಕ್ಕಳಿಗೆ ಶಿಕ್ಷಣ ನೀಡಿ ಎಂಬ ಘೋಷವಾಕ್ಯ ಈಗ ‘‘ಹೆಣ್ಮಕ್ಕಳನ್ನು ಹೆದರಿಸಿ, ಬ್ರಿಜ್ಭೂಷಣ್ರನ್ನು ರಕ್ಷಿಸಿ’’ ಎಂದಾಗಿದೆ. ಈ ನೆಲದ ಕಾನೂನು ಬಿಜೆಪಿಯ ರಾಜಕೀಯವೆಂಬ ಬುಲ್ಡೋಜರ್ ಕೆಳಗೆ ಅಪ್ಪಚ್ಚಿಯಾಗಿದೆ. ಭಾರತದ ಪುತ್ರಿಯರ ನ್ಯಾಯದ ಕೂಗನ್ನು ಮೋದಿ ಸರ್ಕಾರ ಸಮಾಧಿ ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.