ಚಂಡೀಗಢ ವಿಶ್ವವಿದ್ಯಾನಿಲಯದ ಕ್ರೀಡಾಕೂಟದಲ್ಲಿ 21 ವರ್ಷದ ಆಟಗಾರ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ವುಶು ಪಂದ್ಯಾವಳಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಕೆಲ ದಿನಗಳ ಹಿಂದಷ್ಟೇ ಶಾಲೆಗೆ ಹೋಗುತ್ತಿದ್ದ 16 ವರ್ಷದ 10ನೇತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೋರ್ವಳು ಶಾಲೆಯ ಆವರಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಚಂಡೀಗಢದ ವಿಶ್ವವಿದ್ಯಾನಿಲಯದಲ್ಲಿ ನಡೆದ ಕ್ರೀಡಾಕೂಟದಲ್ಲಿ 21 ವರ್ಷದ ಆಟಗಾರನೋರ್ವ ಆಟದ ಅಖಾಡದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದ್ದು, ಆತನ ಕೊನೆಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಚಂಡೀಗಢದ ವಿಶ್ವವಿದ್ಯಾನಿಲಯದಲ್ಲಿ ವಿವಿ ಮಟ್ಟದ ವುಶು ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಈ ಆಟದಲ್ಲಿ ಸ್ಪರ್ಧಾಳುವಾಗಿ ಭಾಗವಹಿಸಿದ್ದ 21 ವರ್ಷದ ವಿದ್ಯಾರ್ಥಿಯೋರ್ವ ಆಟಕ್ಕಾಗಿ ಸಿದ್ಧಪಡಿಸಲಾದ ಅಖಾಡದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಇದು ಕ್ರೀಡಾವಲಯದಲ್ಲಿ ಆಘಾತ ಸೃಷ್ಟಿಸಿದೆ. ಹಠಾತ್ ಆಗಿ ಸಾವಿಗೀಡಾದ ಯುವ ಕ್ರೀಡಾಪಟುವಿನ ಸಾವಿಗೆ ಅನೇಕರು ಮರುಗುತ್ತಿದ್ದಾರೆ. 

ಕೆಲ ಪ್ರಾಥಮಿಕ ವರದಿಗಳ ಪ್ರಕಾರ, ಇಬ್ಬರು ಆಟಗಾರರು ವುಶು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಅಖಾಡದಲ್ಲಿ ಆಟವಾಡುತ್ತಿದ್ದಾಗಲೇ ಸಡನ್ ಆಗಿ ಮ್ಯಾಟ್ ಮೇಲೆ ಕುಸಿದು ಬಿದ್ದಿದ್ದಾನೆ. ಕೂಡಲೇ ವೈದ್ಯಕೀಯ ತಂಡ ಅವರ ಬಳಿ ಧಾವಿಸಿ ಬಂದು ತಪಾಸಣೆ ನಡೆಸಿದರಾದರು ಆ ಹುಡುಗನನ್ನು ಬದುಕುಳಿಸಲು ಸಾಧ್ಯವಾಗದೇ ಸಾವನ್ನಪ್ಪಿದ್ದಾನೆ ಎಂದು ಘೋಷಣೆ ಮಾಡಲಾಯ್ತು. ಈ ಸಾವಿಗೆ ನಿಖರವಾದ ಕಾರಣ ತಿಳಿಯದೇ ಹೋದರೂ ಹೃದಯ ಸಂಬಂಧಿ ಸಮಸ್ಯೆಗಳಿಂದಲೇ ಆತ ಸಾವನ್ನಪ್ಪಿದ್ದಾನೆ ಎಂದು ನಂಬಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ. 

ಹೀಗೆ ಹಠಾತ್ ಆಗಿ ಎಳೆಯ ಪ್ರಾಯದ ಮಕ್ಕಳು, ಯವಕರು ಸಾವನ್ನಪ್ಪುತ್ತಿರುವ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಾ ಇದ್ದು, ಯುವ ಸಮೂಹದಲ್ಲಿ ಆತಂಕ ಸೃಷ್ಟಿಯಾಗಿದೆ. 

Scroll to load tweet…