ಬ್ರೆಡಾ(ಜು.01): ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತದ ಪುರುಷರ ಹಾಕಿ ತಂಡ ಫೈನಲ್ ಪ್ರವೇಶಿಸಿದೆ. ಆತಿಥೇಯ ನೆದರ್ಲೆಂಡ್ಸ್ ವಿರುದ್ಧ ನಡೆದ ರೌಂಡ್ ರಾಬಿನ್ ಹಂತದ ಪಂದ್ಯದಲ್ಲಿ ಭಾರತ 1-1 ಅಂತರದಲ್ಲಿ ಡ್ರಾ ಸಾಧಿಸಿ ನಿಟ್ಟುಸಿರುಬಿಟ್ಟಿತು. ಈ ಮೂಲಕ ಭಾರತ ಫೈನಲ್‌ಗೆ ಎಂಟ್ರಿ ಪಡೆಯಿತು.

ನೆದರ್ಲೆಂಡ್ ವಿರುದ್ಧದ ಪಂದ್ಯ ಭಾರತದಲ್ಲಿ ಭಾರತಕ್ಕೆ ಗೆಲುವು ಅಥವಾ ಡ್ರಾ ಅನಿವಾರ್ಯವಾಗಿತ್ತು. ರೋಚಕ ಹೋರಾಟದಲ್ಲಿ ಹಲವು ಪೆನಾಲ್ಟಿ ಅವಕಾಶವನ್ನ ಭಾರತ ಕೈಚೆಲ್ಲಿತು. ಇತ್ತ ನಾಯಕ ಹಾಗೂ ಗೋಲು ಕೀಪರ್ ಶ್ರೀಜೇಶ್ ಅದ್ಬುತ ಗೋಲ್ ಕೀಪಿಂಗ್ ತಂಡದ ಕೈ ಹಿಡಿಯಿತು. ಹೀಗಾಗಿ ಮೊದಲಾರ್ಧ ಗೋಲಿಲ್ಲದೆ ಅಂತ್ಯಗೊಂಡಿತು.

47ನೇ ನಿಮಿಷದಲ್ಲಿ ಭಾರತದ ಪರ ಮನ್‌ದೀಪ್‌ ಸಿಂಗ್‌ ಗೋಲಿನ ಖಾತೆ ತೆರೆದರು. ಆದರೆ ಭಾರತದ ಸಂಭ್ರಮ ಹೆಚ್ಚು ಹೊತ್ತು ಇರಲಿಲ್.  55ನೇ ನಿಮಿಷದಲ್ಲಿ ಬ್ರಿಂಕ್‌ಮನ್‌ ಗೋಲು ಬಾರಿಸೂ ಮೂಲಕ ನೆದರ್‌ಲೆಂಡ್ಸ್‌ ಸಮಬಲ ಸಾಧಿಸಿತು. 57ನೇ ನಿಮಿಷದಲ್ಲಿ ನೆದರ್‌ಲೆಂಡ್ಸ್‌ ಗೋಲು ಬಾರಿಸಿತಾದರೂ, ಗೋಲು ನೀಡಲು ರೆಫ್ರಿ ನಿರಾಕರಿಸಿದರು. ಕೊನೆ ಒಂದೂವರೆ ನಿಮಿಷದಲ್ಲಿ 3 ಪೆನಾಲ್ಟಿಕಾರ್ನರ್‌ ಸಿಕ್ಕರೂ, ನೆದರ್‌ಲೆಂಡ್ಸ್‌ ಒಂದರಲ್ಲೂ ಗೋಲು ಗಳಿಸಲಿಲ್ಲ.

ಫೈನಲ್ ಪ್ರವೇಶಿರುವ ಭಾರತ ಇದೀಗ ಪ್ರಶಸ್ತಿಗಾಗಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಹೋರಾಟ ನಡೆಸಬೇಕಿದೆ. ಇಂದು(ಜು.2) ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ. 2016ರ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ನಲ್ಲೂ ಭಾರತ-ಆಸ್ಪ್ರೇಲಿಯಾ ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ಆಸ್ಪ್ರೇಲಿಯಾ ಗೆದ್ದು ಚಾಂಪಿಯನ್‌ ಆಗಿತ್ತು. ಇದೀಗ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತದ ಮುಂದೆ ಅತ್ಯುತ್ತಮ ಅವಕಾಶ ಒದಗಿಬಂದಿದೆ.