ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಶುಕ್ರವಾರ ರೋಚಕ ಪಂದ್ಯಕ್ಕೆ ಸಾಕ್ಷಿಯಾಯಿತು. ಮಹಿಳಾ ಸಿಂಗಲ್ಸ್‌ನಲ್ಲಿ ಕಳೆದ ವರ್ಷದ ಚಾಂಪಿಯನ್ ಜಪಾನ್‌ನ ನಜೋಮಿ ಓಕುಹಾರ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಪಿ.ವಿ.ಸಿಂಧು 21-17, 21-19 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರು.

ನಾನ್ಜಿಂಗ್[ಆ.04]: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಶುಕ್ರವಾರ ರೋಚಕ ಪಂದ್ಯಕ್ಕೆ ಸಾಕ್ಷಿಯಾಯಿತು. ಮಹಿಳಾ ಸಿಂಗಲ್ಸ್‌ನಲ್ಲಿ ಕಳೆದ ವರ್ಷದ ಚಾಂಪಿಯನ್ ಜಪಾನ್‌ನ ನಜೋಮಿ ಓಕುಹಾರ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಪಿ.ವಿ.ಸಿಂಧು 21-17, 21-19 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರು. 2017ರ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಓಕುಹಾರ ವಿರುದ್ಧ ಅನುಭವಿಸಿದ್ದ ಸೋಲಿಗೆ ಸಿಂಧು ಸೇಡು ತೀರಿಸಿಕೊಂಡರು.

ಭಾರೀ ರೋಚಕತೆಯಿಂದ ಕೂಡಿದ್ದ ಪಂದ್ಯದ ಮೊದಲ ಗೇಮ್‌ನಲ್ಲಿ ಸಿಂಧು ಆರಂಭಿಕ ಹಿನ್ನಡೆ ಅನುಭವಿಸಿದರು. ಆದರೆ ಛಲ ಬಿಡದೆ ಹೋರಾಡಿದ ಭಾರತೀಯ ತಾರೆ 4 ಅಂಕಗಳ ಅಂತರದಲ್ಲಿ ಮೊದಲ ಗೇಮ್ ತಮ್ಮದಾಗಿಸಿಕೊಂಡರು. ದ್ವಿತೀಯ ಗೇಮ್‌ನಲ್ಲಿ ನೇರಾನೇರ ಪೈಪೋಟಿ ಏರ್ಪಟ್ಟಿತ್ತು.

ಸಿಂಧು ಆರಂಭದಲ್ಲಿ ಹಿಂದಿದ್ದರೂ, ಸ್ಥಿರ ಹೊಡೆತಗಳ ಮೂಲಕ ಸಮಬಲ ಸಾಧಿಸಿದರು. 19-19 ಅಂಕಗಳ ವರೆಗೂ ಸಮಬಲದ ಪೈಪೋಟಿ ಇತ್ತು. ಆದರೆ ಓಕುಹಾರ ಮಾಡಿದ ತಪ್ಪಿನಿಂದಾಗಿ ಸಿಂಧುಗೆ ಕೊನೆ 2 ಅಂಕಗಳು ಸುಲಭವಾಗಿ ದೊರೆತವು. ಸೆಮೀಸ್‌ನಲ್ಲಿ ಸಿಂಧು, ಮತ್ತೋರ್ವ ಜಪಾನ್‌ನ ಆಟಗಾರ್ತಿ ಅಕಾನೆ ಯಮಗೂಚಿ ವಿರುದ್ಧ ಸೆಣಸಲಿದ್ದಾರೆ.