Asianet Suvarna News Asianet Suvarna News

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌: ಪ್ರಿ ಕ್ವಾರ್ಟರ್‌ಗೆ ಸೇನ್‌, ಸೋತ ಸಿಂಧು ಔಟ್‌!

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮಿಶ್ರಫಲ
ಶುಭಾರಂಭದ ನಿರೀಕ್ಷೆಯಲ್ಲಿದ್ದ ಪಿ.ವಿ.ಸಿಂಧುಗೆ ಶಾಕ್‌
2021ರಲ್ಲಿ ಕಂಚಿನ ಪದಕ ಗೆದ್ದಿದ್ದ ಲಕ್ಷ್ಯ ಸೇನ್, ಮೂರನೇ ಸುತ್ತಿಗೆ ಲಗ್ಗೆ

BWF World Championships 2023 PV Sindhu out Lakshya Sen through to third round kvn
Author
First Published Aug 23, 2023, 8:57 AM IST

ಕೋಪೆನ್‌ಹೇಗನ್‌(ಆ.23): ಭಾರತದ ತಾರಾ ಶಟ್ಲರ್‌ ಲಕ್ಷ್ಯ ಸೇನ್‌ ಇಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಶುಭಾರಂಭದ ನಿರೀಕ್ಷೆಯಲ್ಲಿದ್ದ ಪಿ.ವಿ.ಸಿಂಧು ಸೋತು ಹೊರಬಿದ್ದಿದ್ದಾರೆ.

2021ರಲ್ಲಿ ಕಂಚಿನ ಪದಕ ಗೆದ್ದಿದ್ದ ಸೇನ್‌, ಮಂಗಳವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಜಿಯೋನ್‌ ಹ್ಯೋಕ್‌ ಜಿನ್‌ ವಿರುದ್ಧ 21-11, 21-12 ಅಂತರದಲ್ಲಿ ಸುಲಭ ಗೆಲುವು ದಾಖಲಿಸಿದರು. ಇದೇ ವೇಳೆ ಮಹಿಳಾ ಸಿಂಗಲ್ಸ್‌ನಲ್ಲಿ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಪಿ.ವಿ.ಸಿಂಧು, ಮಂಗಳವಾರ 2ನೇ ಸುತ್ತಿನಲ್ಲಿ ಜಪಾನ್‌ನ ನೊಜೊಮಿ ಒಕುಹಾರ ವಿರುದ್ಧ 14-21, 14-21 ಅಂತರದಲ್ಲಿ ಸೋಲನುಭವಿಸಿದರು. ಮಹಿಳಾ ಡಬಲ್ಸ್‌ನಲ್ಲಿ ಶಿಖಾ ಗೌತಮ್-ಅಶ್ವಿನಿ ಭಟ್‌ ಕೂಡಾ ಸೋತು ಹೊರಬಿದ್ದರು.

ಜಿಪಿಬಿಎಲ್‌ನಲ್ಲಿ ನೂತನ ಪ್ರಯೋಗ: ಟ್ರಿಪಲ್ಸ್‌ ಪಂದ್ಯ!

ಬೆಂಗಳೂರೂ: ಆ.27ರಿಂದ ಸೆ.8ರ ವರೆಗೆ ನಗರದಲ್ಲಿ ನಡೆಯಲಿರುವ 2ನೇ ಆವೃತ್ತಿಯ ಗ್ರ್ಯಾನ್ ಪ್ರಿ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಆಯೋಜಕರು ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಮೊದಲ ಬಾರಿಗೆ ಟ್ರಿಪಲ್ಸ್ ಪಂದ್ಯವನ್ನು ಟೂರ್ನಿಯಲ್ಲಿ ಪರಿಚಯಿಸಲಿದ್ದಾರೆ. ಟೂರ್ನಿಯಲ್ಲಿ 8 ತಂಡಗಳು ಪಾಲ್ಗೊಳ್ಳಲಿದ್ದು, 9 ದೇಶಗಳ ಆಟಗಾರರು ಭಾಗಿಯಾಗಲಿದ್ದಾರೆ. ಟೂರ್ನಿಯಲ್ಲಿ ಈ ಬಾರಿ ಪುರುಷರ ಸಿಂಗಲ್ಸ್‌, ಡಬಲ್ಸ್, ಮಹಿಳಾ ಸಿಂಗಲ್ಸ್‌, ಮಿಶ್ರ ಡಬಲ್ಸ್‌ ಹಾಗೂ ಸೂಪರ್‌ ಮ್ಯಾಚ್‌ ಪಂದ್ಯಗಳು ನಡೆಯಲಿವೆ. ಸೂಪರ್ ಮ್ಯಾಚ್‌ನಲ್ಲಿ ತಲಾ ಮೂವರು ಪುರುಷ ಶಟ್ಲರ್‌ಗಳು ಕಣಕ್ಕಿಳಿಯಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

Chess World Cup: ಫೈನಲ್‌ ಮೊದಲ ಸುತ್ತಿನಲ್ಲಿ ಡ್ರಾ ಸಾಧಿಸಿದ ಪ್ರಜ್ಞಾನಂದ..!

ಒಲಿಂಪಿಕ್ಸ್‌ ಕೋಟಾ ಮಿಸ್‌ ಮಾಡಿದ ಶೂಟರ್‌ ಆದರ್ಶ್‌

ಬಾಕು(ಅಜರ್‌ಬೈಜಾನ್‌): ಭಾರತೀಯ ಶೂಟರ್‌ ಆದರ್ಶ್‌ ಸಿಂಗ್‌ ಸ್ವಲ್ಪದರಲ್ಲೇ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಅವಕಾಶ ಕಳೆದುಕೊಂಡರು. ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವ ಚಾಂಪಿಯನ್‌ಶಿಪ್‌ನ ಪುರುಷರ 25 ಮೀ. ರ್‍ಯಾಪಿಡ್‌ ಫೈರ್‌ ವಿಭಾಗದ ಅರ್ಹತಾ ಸುತ್ತಿನಲ್ಲಿ 583 ಅಂಕಗಳನ್ನು ಪಡೆದು 9ನೇ ಸ್ಥಾನಿಯಾದರು. ಇಷ್ಟೇ ಅಂಕಗಳನ್ನು ಪಡೆದ ಉಕ್ರೇನ್‌ನ ಡೆನಿಸ್‌ ಕುಶ್ನಿರೋವ್‌ 6ನೇ ಸ್ಥಾನ ಪಡೆದು ಫೈನಲ್‌ಗೆ ಪ್ರವೇಶಿಸಿದರು. ಆದರ್ಶ್‌ 6ನೇ ಸ್ಥಾನಿಯಾಗಿ ಫೈನಲ್‌ಗೇರಿದ್ದರೂ ಒಲಿಂಪಿಕ್ಸ್‌ ಅರ್ಹತೆ ಸಿಗುತ್ತಿತ್ತು.

ಕಿರಿಯರ ಹಾಕಿ ಟೂರ್ನಿ: ಭಾರತ ರನ್ನರ್‌-ಅಪ್‌

ಡಸೆಲ್‌ಡಾರ್ಫ್‌(ಜರ್ಮನಿ): ವರ್ಷಾಂತ್ಯದಲ್ಲಿ ಮಲೇಷ್ಯಾದಲ್ಲಿ ನಡೆಯಲಿರುವ ಎಫ್‌ಐಎಚ್‌ ಕಿರಿಯರ ಹಾಕಿ ವಿಶ್ವಕಪ್‌ನ ಸಿದ್ಧತೆಗಾಗಿ ನಡೆದ 4 ರಾಷ್ಟ್ರಗಳ ಟೂರ್ನಿಯಲ್ಲಿ ಭಾರತ ತಂಡ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಮಂಗಳವಾರ ಜರ್ಮನಿ ವಿರುದ್ಧ ನಡೆದ ಕೊನೆ ಪಂದ್ಯದಲ್ಲಿ ಭಾರತ 1-6 ಗೋಲುಗಳಿಂದ ಸೋಲನುಭವಿಸಿತು. ಭಾರತದ ಪರ ಸುದೀಪ್‌ ಚಿರ್ಮಾಕೊ 22ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು. ಎಲ್ಲಾ 3 ಪಂದ್ಯ ಗೆದ್ದ ಜರ್ಮನಿ ಪ್ರಶಸ್ತಿ ಪಡೆಯಿತು. ಇದೇ ವೇಳೆ ಮಹಿಳೆಯರ 4 ರಾಷ್ಟ್ರಗಳ ಟೂರ್ನಿಯಲ್ಲಿ ಸ್ಪೇನ್‌ ವಿರುದ್ಧ 2-1 ಗೋಲುಗಳಿಂದ ಜಯಗಳಿಸಿತು.

'ನಮಸ್ಕಾರ ಮೋದಿಜಿ': ಹರಿಣಗಳ ನಾಡಿಗೆ ಆತ್ಮೀಯವಾಗಿ ಸ್ವಾಗತಿಸಿದ, ಗ್ಯಾರಿ ಕರ್ಸ್ಟನ್‌, ಜಾಂಟಿ ರೋಡ್ಸ್‌..!

ಡುರಾಂಡ್ ಕಪ್: ಕೊನೆಗೂ ಗೆದ್ದ ಬಿಎಫ್‌ಸಿ

ಕೋಲ್ಕತಾ: ಡುರಾಂಡ್‌ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಮಂಗಳವಾರ ಗೋಕುಲಂ ಕೇರಳ ಎಫ್‌ಸಿ ವಿರುದ್ಧ 2-0 ಜಯಗಳಿಸಿತು. ಇದು ಟೂರ್ನಿಯಲ್ಲಿ ಬಿಎಫ್‌ಸಿಗೆ ಒಲಿದ ಮೊದಲ ಜಯ. ಇದರ ಹೊರತಾಗಿಯೂ ತಂಡ ಕ್ವಾರ್ಟರ್‌ಫೈನಲ್‌ ಪ್ರವೇಶಿಸಲು ವಿಫಲವಾಯಿತು. ಗೋಕುಲಂ ಸೋತರೂ ಕ್ವಾರ್ಟರ್‌ಫೈನಲ್‌ಗೇರಿತು.

Follow Us:
Download App:
  • android
  • ios