ಫಿಫಾ ವಿಶ್ವಕಪ್ 2018: ಬ್ರೆಜಿಲ್ ಓಟಕ್ಕೆ ಬ್ರೇಕ್ ಹಾಕುತ್ತಾ ಬೆಲ್ಜಿಯಂ?
ಫಿಫಾ ವಿಶ್ವಕಪ್ ಟೂರ್ನಿ ಕ್ವಾರ್ಟರ್ ಫೈನಲ್ ಹೋರಾಟದ 2ನೇ ಪಂದ್ಯಕ್ಕಾಗಿ ಅಭಿಮಾನಿಗಳು ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಬ್ರೆಜಿಲ್ ಹಾಗೂ ಬೆಲ್ಜಿಯಂ ನಡುವಿನ ಹೋರಾಟದಲ್ಲಿ ಯಾರು ಮುಂದಿನ ಹಂತ ಪ್ರವೇಶಿಸುತ್ತಾರೆ? ಯಾರು ಟೂರ್ನಿಗೆ ವಿದಾಯ ಹೇಳಲಿದ್ದಾರೆ? ಇಲ್ಲಿದೆ ವಿವರ.
ರಷ್ಯಾ(ಜು.06): ಫಿಫಾ ವಿಶ್ವಕಪ್ ಟೂರ್ನಿಯ ಶುಕ್ರವಾರದ 2ನೇ ಕ್ವಾರ್ಟರ್ ಫೈನಲ್‌ನಲ್ಲಿ 5 ಬಾರಿ ವಿಶ್ವ ಚಾಂಪಿಯನ್ ಬ್ರೆಜಿಲ್ ತಂಡ, ಬೆಲ್ಜಿಯಂ ವಿರುದ್ಧ ಹೋರಾಟ ನಡೆಸಲಿದೆ. ಈಗಾಗಲೇ ಪ್ರಶಸ್ತಿ ರೇಸ್‌ನಲ್ಲಿ ಗುರುತಿಸಿಕೊಂಡಿದ್ದ ಬಲಿಷ್ಠ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ಹೀಗಾಗಿ ಬ್ರೆಜಿಲ್ ಮೇಲೆ ಹೆಚ್ಚಿನ ಒತ್ತಡವಿದೆ.
ಈ ವಿಶ್ವಕಪ್‌ನ ಅತ್ಯಂತ ಬಲಿಷ್ಠ ರಕ್ಷಣಾ ಪಡೆ ಹೊಂದಿರುವ ತಂಡಗಳಲ್ಲಿ ಬ್ರೆಜಿಲ್ ಅಗ್ರಸಾಲಿನಲ್ಲಿ ನಿಲ್ಲುತ್ತದೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಸ್ವಿಜರ್‌ಲೆಂಡ್ ವಿರುದ್ಧ 1 ಗೋಲು ಬಿಟ್ಟುಕೊಟ್ಟಿದ್ದ ಬಳಿಕ, ಬ್ರೆಜಿಲ್ ಮತ್ತೆ ಎದುರಾಳಿಗೆ ಗೋಲು ಬಾರಿಸಲು ಅವಕಾಶ ನೀಡಿಲ್ಲ. ಜೋ ಮಿರಾಂಡ ಹಾಗೂ ಥಿಯಾಗೋ ಸಿಲ್ವಾ ಈ ವಿಶ್ವಕಪ್‌ನ ಅತ್ಯಂತ ಬಲಿಷ್ಠ ಸೆಂಟರ್ ಬ್ಯಾಕ್‌ಗಳಾಗಿದ್ದು, ಇವರಿಬ್ಬರನ್ನು ದಾಟಿ ಗೋಲು ಗಳಿಸುವುದು ರೊಮೆಲು ಲುಕಾಕು,ಏಡನ್ ಹಜಾರ್ಡ್, ಕೆವಿನ್ ಡಿ ಬ್ರ್ಯುನೆಯಂತಹ ಅತ್ಯುತ್ತಮ ಸ್ಟೆ್ರೖಕರ್‌ಗಳನ್ನೊಳಗೊಂಡ ಬೆಲ್ಜಿಯಂಗೆ ಕಠಿಣ ಸವಾಲೆನಿಸಲಿದೆ.
ಇದರ ಜತೆಗೆ ನೇಯ್ಮರ್, ವಿಲಿಯನ್‌ರಂತಹ ಪ್ರಚಂಡ ಆಟಗಾರರನ್ನು ಗೋಲು ಬಾರಿಸದಂತೆ ತಡೆಯುವುದು ಬೆಲ್ಜಿಯಂಗೆ ಇನ್ನೂ ಕಷ್ಟದ ಸವಾಲಾಗಲಿದೆ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ನೇಯ್ಮರ್, ಕಳೆದ ಪಂದ್ಯದಲ್ಲಿ ಆಕರ್ಷಕ ಗೋಲು ದಾಖಲಿಸಿದ್ದರ ಜತೆಗೆ ರಾಬೆರ್ಟೋ ಫಿರ್ಮಿನೋಗೆ ಗೋಲು ಬಾರಿಸಲು ಸಹಕಾರಿ ನೀಡಿದ್ದರು. ಶುಕ್ರವಾರದ ಕ್ವಾರ್ಟರ್ ಗೆದ್ದು, ಫ್ರಾನ್ಸ್ ಇಲ್ಲವೇ ಉರುಗ್ವೆಯನ್ನು ಸೆಮೀಸ್‌ನಲ್ಲಿ ಎದುರಿಸಲು ಬ್ರೆಜಿಲ್ ಕಾತರಗೊಂಡಿದೆ.