"ಐಪಿಎಲ್'ಗೋಸ್ಕರ ರಾಷ್ಟ್ರೀಯ ತಂಡಕ್ಕೆ ಕೈಕೊಟ್ಟ ಕಳಂಕ ಕೊಹ್ಲಿಯವರನ್ನು ಮೆತ್ತಿಕೊಳ್ಳುತ್ತದೆ," ಎಂದು ಹಾಡ್ಜ್ ಟೀಕಿಸಿದ್ದಾರೆ.

ಧರ್ಮಶಾಲಾ(ಮಾ. 27): ವಿರಾಟ್ ಕೊಹ್ಲಿ ಭುಜದ ಕಾರಣದಿಂದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಿಲ್ಲ. ಆದರೆ, ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ ಹಾಡ್ಜ್ ಪ್ರಕಾರ ವಿರಾಟ್ ಕೊಹ್ಲಿ ಆಡದೇ ಇರುವುದು ಗಾಯದ ಕಾರಣದಿಂದಲ್ಲವಂತೆ. ಮುಂಬರುವ ಐಪಿಎಲ್ ಪಂದ್ಯಾವಳಿಗೆ ಅಗತ್ಯ ವಿಶ್ರಾಂತಿ ಪಡೆಯಲು ಕೊಹ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹಾಡ್ಜ್ ಅಭಿಪ್ರಾಯಪಟ್ಟಿದ್ದಾರೆ.

"ವಿರಾಟ್ ಕೊಹ್ಲಿ ಗಂಭೀರವಾಗಿ ಗಾಯಗೊಂಡಿದ್ದರೆ ಬೇರೆ ಮಾತು. ಆದರೆ, ಅವರು ಇನ್ನು ಕೆಲ ದಿನಗಳಲ್ಲಿ ಆರ್'ಸಿಬಿ ಪರ ಕಾಣಿಸಿಕೊಂಡಿದ್ದೇ ಆದಲ್ಲಿ ಕೊಹ್ಲಿಯ ನಿಜ ಬಣ್ಣ ಬಯಲಿಗೆ ಬಂದಂತಾಗುತ್ತದೆ. ಐಪಿಎಲ್'ಗೋಸ್ಕರ ರಾಷ್ಟ್ರೀಯ ತಂಡಕ್ಕೆ ಕೈಕೊಟ್ಟ ಕಳಂಕ ಅವರನ್ನು ಮೆತ್ತಿಕೊಳ್ಳುತ್ತದೆ," ಎಂದು ಗುಜರಾತ್ ಲಯನ್ಸ್ ತಂಡದ ಕೋಚ್ ಕೂಡ ಆಗಿರುವ ಹಾಡ್ಜ್ ಟೀಕಿಸಿದ್ದಾರೆ.

"ಈ ಮುಂಚೆ ಸಾಕಷ್ಟು ಬಾರಿ ಇಂಥದ್ದು ಆಗಿದೆ. ವಿರಾಟ್ ಅವರಷ್ಟೇ ಅಲ್ಲ, ಐಪಿಎಲ್ ಶುರುವಾಗುವ ವೇಳೆ ಬಹಳಷ್ಟು ಆಟಗಾರರು ದುತ್ತನೇ ಆಗಮಿಸಿದ್ದುಂಟು. ಯಾಕೆಂದರೆ, ಐಪಿಎಲ್'ನಲ್ಲಿ ಸಖತ್ ಹಣ ಹರಿದಾಡುತ್ತದೆ.. ವಿಶ್ವಾದ್ಯಂತ ಕ್ರಿಕೆಟಿಗರಿಗೆ ಐಪಿಎಲ್ ಒಂದು ಬಹುಮುಖ್ಯ ಟೂರ್ನಿಯಾಗಿದೆ" ಎಂದು ಬ್ರಾಡ್ ಹಾಡ್ಜ್ ಹೇಳಿದ್ದಾರೆ.

ಏಪ್ರಿಲ್ 5ರಂದು ಆರ್'ಸಿಬಿ ತನ್ನ ಮೊದಲ ಪಂದ್ಯವನ್ನು ಸನ್'ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.