ಲವ್ಲೀನಾ ಕಿರುಕುಳ ಆರೋಪ: ಕೋಚ್ ಬದಲಿಸಿದ ತೀರ್ಮಾನ ಸಮರ್ಥಿಸಿಕೊಂಡ ಬಿಎಫ್ಐ, ಒಲಿಂಪಿಕ್‌ ಸಂಸ್ಥೆ.!

* ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟಕ್ಕೆ ಕ್ಷಣಗಣನೆ 
*ಕಾಮನ್‌ವೆಲ್ತ್ ಕೂಟಕ್ಕೂ ಮುನ್ನ ಲವ್ಲೀನಾ ಬೊರ್ಗೊಹೈನ್ ಗಂಭೀರ ಆರೋಪ
ಲವ್ಕೀನಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಭಾರತೀಯ ಬಾಕ್ಸಿಂಗ್ ಫೆಡರೇಷನ್

Boxing Federation of India reacts harassment allegations of Olympic Medallist Lovlina Borgohain kvn

ನವದೆಹಲಿ(ಜು.26): ಲವ್ಲೀನಾ ಬೊರ್ಗೊಹೈನ್‌ಗೆ ಕೋಚ್‌ ಒದಗಿಸುವ ವಿಚಾರದಲ್ಲಿ ಭಾರತೀಯ ಬಾಕ್ಸಿಂಗ್‌ ಫೆಡರೇಶನ್‌(ಬಿಎಫ್‌ಐ) ಮತ್ತು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ತಮ್ಮ ತಮ್ಮ ಸಮರ್ಥನೆಗಳನ್ನು ನೀಡಿವೆ. ಒಟ್ಟು ಸ್ಪರ್ಧಿಗಳ ಮೂರನೇ ಒಂದು ಭಾಗದಷ್ಟು ಸಹಾಯಕ ಸಿಬ್ಬಂದಿಯನ್ನು ಕ್ರೀಡಾಕೂಟಕ್ಕೆ ಕಳುಹಿಸಲಾಗುತ್ತದೆ. ಭಾರತೀಯ ಬಾಕ್ಸಿಂಗ್‌ ತಂಡದಲ್ಲಿ 12 ಸ್ಪರ್ಧಿಗಳಿದ್ದು(8 ಪುರುಷರು, 4 ಮಹಿಳೆಯರು), ಕೋಚ್‌ ಸೇರಿ ನಾಲ್ವರು ಸಹಾಯಕ ಸಿಬ್ಬಂದಿಗೆ ಅವಕಾಶವಿತ್ತು. ಆದರೆ ಐಒಎ ಬಳಿ ಮನವಿ ಮಾಡಿ 4ರ ಬದಲು 8 ಸಹಾಯಕ ಸಿಬ್ಬಂದಿಯನ್ನು ಕಳುಹಿಸಿದ್ದೇವೆ ಎಂದು ಬಿಎಫ್‌ಐ ಹೇಳಿದೆ. ಐರ್ಲೆಂಡ್‌ನಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಕೋಚ್‌ ಸಂಧ್ಯಾ ಅವರು ಲವ್ಲೀನಾ ಬೊರ್ಗೊಹೈನ್‌ ಅವರೊಂದಿಗಿದ್ದರು ಎಂದು ಬಿಎಫ್‌ಐ ತಿಳಿಸಿದೆ.

ಇನ್ನು ಐಒಎ ಪ್ರಧಾನ ಕಾರ‍್ಯದರ್ಶಿ ರಾಜೀವ್‌ ಮೆಹ್ತಾ ಪ್ರತಿಕ್ರಿಯಿಸಿ, ‘ಬಿಎಫ್‌ಐ ಯಾವ ಕೋಚ್‌ಗಳ ಹೆಸರನ್ನು ಸೂಚಿಸಿತ್ತೋ ಆ ಕೋಚ್‌ಗಳನ್ನು ಕಳುಹಿಸಿದ್ದೇವೆ. ನಿಯಮದ ಪ್ರಕಾರ ನಾಲ್ವರು ಸಿಬ್ಬಂದಿಗೆ ಮಾತ್ರ ಅವಕಾಶವಿದೆ. ಆದರೆ 8 ಸಿಬ್ಬಂದಿಯನ್ನು ಕಳುಹಿಸಿದ್ದೇವೆ. ಇದಕ್ಕಿಂತ ಹೆಚ್ಚು ಏನು ಮಾಡಲು ಸಾಧ್ಯ’ ಎಂದಿದ್ದಾರೆ.

ಬಾಕ್ಸಿಂಗ್‌ ಫೆಡರೇಶನ್‌ನಿಂದ ಮಾನಸಿಕ ಕಿರುಕುಳ: ಲವ್ಲೀನಾ

ಒಲಿಂಪಿಕ್ಸ್‌ ಕಂಚು ವಿಜೇತೆ ಲವ್ಲೀನಾ ಬೊರ್ಗೊಹೈನ್‌, ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸಲು ಭಾರತೀಯ ಬಾಕ್ಸಿಂಗ್‌ ಫೆಡರೇಶನ್‌(ಬಿಎಫ್‌ಐ) ಮತ್ತು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಬಿಡುತ್ತಿಲ್ಲ. ಈ ಸಂಸ್ಥೆಗಳ ರಾಜಕೀಯದಿಂದಾಗಿ ತಾವು ಮಾನಸಿಕ ಕಿರುಕುಳ ಅನುಭವಿಸುತ್ತಿರುವುದಾಗಿ ಆರೋಪಿಸಿದ್ದಾರೆ. ಭಾನುವಾರ ಕಾಮನ್‌ವೆಲ್ತ್‌ ಕ್ರೀಡಾ ಗ್ರಾಮಕ್ಕೆ ಭಾರತ ಬಾಕ್ಸಿಂಗ್‌ ತಂಡ ಪ್ರವೇಶಿಸಿದ್ದು, ಲವ್ಲೀನಾ ಅವರ ಕೋಚ್‌ ಸಂಧ್ಯಾ ಗುರುಂಗ್‌ ಅವರಿಗೆ ಪ್ರವೇಶ ನಿಕಾರಿಸಲಾಗಿದೆ. ಜೊತೆಗೆ ಅವರ ಸ್ಟ್ರೆಂಥ್‌ ಅಂಡ್‌ ಕಂಡೀಷನಿಂಗ್‌ ಕೋಚ್‌ ಅಮೇಯ್‌ ಕೋಲೆಕರ್‌ಗೆ ಬರ್ಮಿಂಗ್‌ಹ್ಯಾಮ್‌ಗೆ ಪ್ರಯಾಣಿಸಲು ಅನುಮತಿಯನ್ನೇ ನೀಡಿಲ್ಲ.

ಈ ಬಗ್ಗೆ ಟ್ವೀಟರ್‌ನಲ್ಲಿ ನೋವು ಹಂಚಿಕೊಂಡಿರುವ ಲವ್ಲೀನಾ, ‘ನನಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಒಲಿಂಪಿಕ್ಸ್‌ ಪದಕ ಗೆಲ್ಲಲು ನೆರವಾದ ನನ್ನ ಕೋಚ್‌ಗಳನ್ನು ನಿರ್ಲಕ್ಷ್ಯಿಸಲಾಗಿದ್ದು, ನನ್ನ ತಯಾರಿಗೆ ಅಡ್ಡಿಯಾಗುತ್ತಿದೆ. ಕೈಮುಗಿದು ಕೇಳಿಕೊಂಡರೂ ನನ್ನ ಕೋಚ್‌ ಸಂಧ್ಯಾ ಗುರುಂಗ್‌ ಅವರಿಗೆ ಕ್ರೀಡಾ ಗ್ರಾಮಕ್ಕೆ ಪ್ರವೇಶ ನೀಡಲಾಗುತ್ತಿಲ್ಲ. ನನ್ನ ಮತ್ತೊಬ್ಬ ಕೋಚ್‌ ಅನ್ನು ಭಾರತಕ್ಕೆ ವಾಪಸ್‌ ಕಳುಹಿಸಲಾಗಿದೆ. ಇದೇ ಕಾರಣಗಳಿಂದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಾನು ನಿರೀಕ್ಷಿತ ಪ್ರದರ್ಶನ ತೋರಲು ಆಗುತ್ತಿಲ್ಲ. ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲೂ ಅದೇ ರೀತಿ ಆಗುವುದು ನನಗೆ ಇಷ್ಟವಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಒಲಿಂಪಿಕ್ ಪದಕ ವಿಜೇತ ಲೊವ್ಲಿನಾಗೆ ಕಿರುಕುಳ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಬಾಕ್ಸರ್!

ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಫ್‌ಐ, ಕಾಮನ್‌ವೆಲ್ತ್‌ ಗೇಮ್ಸ್‌ಗೆ ಕೋಚ್‌ಗಳನ್ನು ಕಳುಹಿಸುವ ಅಧಿಕಾರ ಐಒಎ ಕೈಯಲ್ಲಿದೆ ಎಂದಿದೆ. ಈ ವಿವಾದಕ್ಕೆ ತೆರೆ ಎಳೆಯಲು ಕೇಂದ್ರ ಕ್ರೀಡಾ ಸಚಿವಾಲಯ ಮಧ್ಯ ಪ್ರವೇಶಿಸಿದ್ದು, ಆದಷ್ಟುಬೇಗ ಲವ್ಲೀನಾರ ಕೋಚ್‌ಗಳನ್ನು ಕ್ರೀಡಾ ಗ್ರಾಮಕ್ಕೆ ಕಳುಹಿಸಲು ವ್ಯವಸ್ಥೆ ಮಾಡುವಂತೆ ಐಒಎಗೆ ಸೂಚಿಸಿದೆ.

ಬಾಕ್ಸರ್‌ ಅಲಿ ಗೆದ್ದಿದ್ದ ಬೆಲ್ಟ್‌ 49 ಕೋಟಿ ರು.ಗೆ ಹರಾಜು!

ಚಿಕಾಗೋ: 1974ರಲ್ಲಿ ನಡೆದಿದ್ದ ಜನಪ್ರಿಯ ‘ರಂಬಲ್‌ ಇನ್‌ ದಿ ಜಂಗಲ್‌’ ಬಾಕ್ಸಿಂಗ್‌ ಪಂದ್ಯದ ವೇಳೆ ದಿಗ್ಗಜ ಬಾಕ್ಸರ್‌ ಮೊಹಮದ್‌ ಅಲಿ ಗೆದ್ದಿದ್ದ ಚಾಂಪಿಯನ್‌ಶಿಪ್‌ ಬೆಲ್ಟ್‌, ಭಾನುವಾರ (ಜು.24) ಬರೋಬ್ಬರಿ 6.18 ಮಿಲಿಯನ್‌ ಅಮೆರಿಕನ್‌ ಡಾಲರ್‌(ಅಂದಾಜು 49.32 ಕೋಟಿ ರು.)ಗೆ ಹರಾಜಾಗಿದೆ. ಜಾರ್ಜ್‌ ಫೋರ್‌ಮನ್‌ರನ್ನು ಬಗ್ಗುಬಡಿದಿದ್ದ ಅಲಿ, ಹೆವಿವೇಟ್‌ ಚಾಂಪಿಯನ್‌ಶಿಪ್‌ ಬೆಲ್ಟ್‌ ಸಂಪಾದಿಸಿದ್ದರು. ಅಮೆರಿಕದ ರಾಷ್ಟ್ರೀಯ ಫುಟ್ಬಾಲ್‌ ಲೀಗ್‌(ಎನ್‌ಎಫ್‌ಎಲ್‌) ತಂಡ ಇಂಡಿಯಾನಾಪೊಲಿಸ್‌ ಕೋಲ್ಟ್ಸ್‌ನ ಸಿಇಒ ಜಿಮ್‌ ಇರ್ಸೇ, ಅಲಿಯ ಬೆಲ್ಟ್‌ ಅನ್ನು ಭಾರೀ ಮೊತ್ತ ನೀಡಿ ಖರೀದಿಸಿದ್ದಾರೆ.

Latest Videos
Follow Us:
Download App:
  • android
  • ios