ಪಂದ್ಯಗಳು ದುಬೈ ಮತ್ತು ಪಾಕಿಸ್ತಾನದಲ್ಲಿ ನಡೆಯಲಿದ್ದು, ಭಾರತ ಸೇರಿ 6 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಪಾಕಿಸ್ತಾನಕ್ಕೆ ತೆರಳಲು, ಭಾರತ ಸರ್ಕಾರ ಅನುಮತಿ ನಿರಾಕರಿಸಿದ್ದರಿಂದ ಭಾರತದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿವೆ
ದುಬೈ(ಜ.08): 5ನೇ ಅಂಧರ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಇಂದಿನಿಂದ ಆರಂಭವಾಗಿದ್ದು, ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.
ಪಂದ್ಯಗಳು ದುಬೈ ಮತ್ತು ಪಾಕಿಸ್ತಾನದಲ್ಲಿ ನಡೆಯಲಿದ್ದು, ಭಾರತ ಸೇರಿ 6 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಪಾಕಿಸ್ತಾನಕ್ಕೆ ತೆರಳಲು, ಭಾರತ ಸರ್ಕಾರ ಅನುಮತಿ ನಿರಾಕರಿಸಿದ್ದರಿಂದ ಭಾರತದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಇತರೆ ತಂಡಗಳ ಕೆಲ ಪಂದ್ಯಗಳಿಗೆ ಮಾತ್ರ ಪಾಕಿಸ್ತಾನದ ಲಾಹೋರ್ ಆತಿಥ್ಯ ವಹಿಸಲಿದೆ. ಭಾನುವಾರ ಲಾಹೋರ್ ಮತ್ತು ದುಬೈನಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.
ಅಜಯ್ ಕುಮಾರ್ ರೆಡ್ಡಿ ನೇತೃತ್ವದ ಭಾರತ ತಂಡ ಲೀಗ್'ನಲ್ಲಿ 5 ಪಂದ್ಯಗಳನ್ನಾಡಲಿದೆ. ತಂಡದಲ್ಲಿರುವ 17 ಆಟಗಾರರ ಪೈಕಿ ಪ್ರಕಾಶ್ ಜಯರಾಮಯ್ಯ, ಬಸಪ್ಪ ವಾದ್ಗಲ್ ಮತ್ತು ಸುನಿಲ್ ರಮೇಶ್ ಕರ್ನಾಟಕದವರಾಗಿದ್ದಾರೆ. ಶನಿವಾರ ಮಧ್ಯಾಹ್ನ ದುಬೈಗೆ ಬಂದಿಳಿದ ಭಾರತ ತಂಡ ಪೂರ್ವಭಾವಿ ಅಭ್ಯಾಸ ನಡೆಸಿದೆ. ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡ, ಈ ಬಾರಿಯ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಮೊದಲ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ಪ್ರಶಸ್ತಿ ಗೆದ್ದರೆ, ಬಳಿಕ 2 ಬಾರಿ ಪಾಕಿಸ್ತಾನ ಟ್ರೋಫಿ ಗೆದ್ದಿತ್ತು. 4ನೇ ಆವೃತ್ತಿಯಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಭಾರತ ತಂಡ ಜ.10ಕ್ಕೆ ಶ್ರೀಲಂಕಾ, ಜ.12ಕ್ಕೆ ಪಾಕಿಸ್ತಾನ, ಜ.13ಕ್ಕೆ ಬಾಂಗ್ಲಾದೇಶ, ಜ.14ಕ್ಕೆ ನೇಪಾಳ ವಿರುದ್ಧ ಸೆಣಸಾಡಲಿದೆ. ಜ.17, 18ಕ್ಕೆ ಸೆಮಿಫೈನಲ್ ಹಾಗೂ ಜ.21ಕ್ಕೆ ಫೈನಲ್ ಪಂದ್ಯ ನಡೆಯಲಿದೆ.
