* 36ನೇ ಹುಟ್ಟುಹಬ್ಬ ಆಚರಿಸಿಕೊಂಡ ಟೆನಿಸ್ ದಿಗ್ಗಜ ರಾಫೆಲ್ ನಡಾಲ್* ದಾಖಲೆಯ 14ನೇ ಫ್ರೆಂಚ್ ಓಪನ್‌ ಫೈನಲ್‌ ಮೇಲೆ ಕಣ್ಣಿಟ್ಟಿರುವ ನಡಾಲ್* ಫ್ರೆಂಚ್ ಓಪನ್ ಸೆಮೀಸ್‌ನಲ್ಲಿಂದು ನಡಾಲ್‌ಗೆ ಜ್ವರೆವ್‌ ಸವಾಲು

ಪ್ಯಾರಿಸ್‌(ಜೂ.03): ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ರಾಫೆಲ್ ನಡಾಲ್ (Rafael Nadal) ಇಂದು(ಜೂ.03) 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಶುಭ ಸಂದರ್ಭದಲ್ಲೇ ನಡಾಲ್‌, ತಮ್ಮ ಟೆನಿಸ್ ವೃತ್ತಿಜೀವನದಲ್ಲಿ ದಾಖಲೆಯ 14ನೇ ಬಾರಿಗೆ ಫ್ರೆಂಚ್ ಓಪನ್‌ ಫೈನಲ್‌ಗೇರಲು ಎದುರು ನೋಡುತ್ತಿದ್ದಾರೆ. 2022ನೇ ಸಾಲಿನ ಫ್ರೆಂಚ್ ಓಪನ್‌ ಸೆಮಿಫೈನಲ್‌ನಲ್ಲಿಂದು ಅಲೆಕ್ಸಾಂಡರ್ ಜ್ವೆರೆವ್ ಹಾಗೂ ರಾಫೆಲ್‌ ನಡಾಲ್‌ ಪ್ರಶಸ್ತಿ ಸುತ್ತು ಪ್ರವೇಶಿಸಲು ಕಾದಾಡಲಿದ್ದಾರೆ. 

13 ಬಾರಿಯ ಫ್ರೆಂಚ್ ಓಪನ್ ಚಾಂಪಿಯನ್‌ ರಾಫೆಲ್ ನಡಾಲ್ ಇಂದು ಸೆಮಿಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಸವಾಲನ್ನು ಎದುರಿಸಲಿದ್ದಾರೆ. ದೀರ್ಘಕಾಲದಿಂದ ಪಾದದ ಗಾಯದಿಂದ ಬಳಲುತ್ತಿರುವ ನಡಾಲ್, ಮಹತ್ವದ ಸೆಮಿಫೈನಲ್‌ನಲ್ಲಿ ಬಲಿಷ್ಠ ಅಲೆಕ್ಸಾಂಡರ್‌ ಜ್ವೆರೆವ್ ಎದುರು ಯಾವ ರೀತಿಯ ಪ್ರದರ್ಶನ ತೋರಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಇನ್ನು ಫ್ರೆಂಚ್ ಓಪನ್ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ತಮ್ಮ ಬದ್ದ ಎದುರಾಳಿ ನೋವಾಕ್ ಜೋಕೋವಿಚ್ ಎದುರು ರಾಫೆಲ್ ನಡಾಲ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ ಪ್ರವೇಶಿಸಿದ್ದರು. ಕ್ವಾರ್ಟರ್‌ ಫೈನಲ್‌ ಗೆಲುವಿನ ಬಳಿಕ ಮಾತನಾಡಿದ್ದ ರಾಫಾ, ಕಳೆದ ಮೂರೂವರೆ ತಿಂಗಳುಗಳ ಕಾಲದ ಸಮಯ ನನ್ನ ಪಾಲಿಗೆ ಅಷ್ಟೊಂದು ಸುಲಭವಾಗಿರಲಿಲ್ಲ. ಆದರೆ ಹೀಗಿದ್ದೂ ನಾನು ಮುನ್ನುಗ್ಗುತ್ತಿದ್ದೇನೆ ಎಂದು ಹೇಳಿದ್ದರು. 

ರಾಫೆಲ್ ನಡಾಲ್ ಈಗಾಗಲೇ 21 ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸುವ ಮೂಲಕ ಅತಿಹೆಚ್ಚು ಗ್ರ್ಯಾನ್ ಸ್ಲಾಂ ಜಯಿಸಿದ ಟೆನಿಸ್ ಆಟಗಾರರ ಪೈಕಿ ನೋವಾಕ್ ಜೋಕೋವಿಚ್ ಹಾಗೂ ರೋಜರ್ ಫೆಡರರ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದ್ದಾರೆ. ಫೆಡರರ್ ಹಾಗೂ ಜೋಕೋವಿಚ್ ತಲಾ 20 ಟೆನಿಸ್ ಗ್ರ್ಯಾನ್‌ ಸ್ಲಾಂ ಜಯಿಸಿದ್ದಾರೆ. ಇದೀಗ ರಾಫೆಲ್ ನಡಾಲ್ 22ನೇ ಗ್ರ್ಯಾನ್‌ ಸ್ಲಾಂ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನೆರಡು ಗೆಲುವು ನಡಾಲ್‌ ಅವರನ್ನು 22ನೇ ಟೆನಿಸ್ ಗ್ರ್ಯಾನ್‌ ಸ್ಲಾಂ ಒಡೆಯರನ್ನಾಗಿಸಲಿದೆ. 

French Open 2022 : ಜೊಕೋವಿಕ್ ರನ್ನು ಮಣಿಸಿ ಸೆಮಿಫೈನಲ್ ಗೇರಿದ ರಾಫೆಲ್ ನಡಾಲ್!

ಒಂದು ವೇಲೆ ನಮಗೆ ಎದುರಾಗುವ ಸಮಸ್ಯೆಗಳನ್ನು ಸುಧಾರಿಸಿಕೊಳ್ಳಲು ಇಲ್ಲವೇ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೇ ಹೋದರೆ, ಮುಂದೇ ಅವೇ ನಮ್ಮ ಪಾಲಿಗೆ ದೊಡ್ಡ ಸಮಸ್ಯೆಗಳಾಗಿ ಬದಲಾಗಿ ಬಿಡುತ್ತವೆ. ನಾನಂತೂ ಪ್ರತಿದಿನವನ್ನು ಎಂಜಾಯ್ ಮಾಡುತ್ತೇನೆ ಹಾಗೂ ಭವಿಷ್ಯದಲ್ಲಿ ಏನಾಗುತ್ತದೆ ಎನ್ನುವುದರ ಕುರಿತಂತೆ ಹೆಚ್ಚು ಆಲೋಚಿಸಲು ಹೋಗುವುದಿಲ್ಲ ಎಂದು ಸ್ಪೇನ್ ಟೆನಿಸಿಗ ಹೇಳಿದ್ದಾರೆ.

Scroll to load tweet…
Scroll to load tweet…

17 ವರ್ಷಗಳ ಸುದೀರ್ಘ ಟೆನಿಸ್ ವೃತ್ತಿ ಜೀವನದಲ್ಲಿ ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹಾಗೂ ವಿಶ್ವದ ನಂ.1 ಟೆನಿಸಿಗ ನೋವಾಕ್ ಜೋಕೋವಿಚ್ ವಿರುದ್ದದ ಗೆಲುವು ನಡಾಲ್ ಪಾಲಿಗೆ 110ನೇ ಗೆಲುವು ಎನಿಸಿಕೊಂಡಿತು. ಇನ್ನು ಜರ್ಮನಿಯ ಅಲೆಕ್ಸಾಂಡರ್ ಜ್ವರೆವ್‌ ಸತತ ಎರಡನೇ ಬಾರಿಗೆ ಫ್ರೆಂಚ್ ಓಪನ್ ಸೆಮಿಫೈನಲ್ ಪ್ರವೇಶಿಸಿದ್ದು, ಚೊಚ್ಚಲ ಗ್ರ್ಯಾನ್‌ ಸ್ಲಾಂ ಗೆಲ್ಲುವ ಕನವರಿಕಯಲ್ಲಿದ್ದಾರೆ. ರಾಫೆಲ್ ನಡಾಲ್ ಅವರಿಗಿಂತ 11 ವರ್ಷ ಚಿಕ್ಕವರೆನಿಸಿಕೊಂಡಿರುವ ಜ್ವರೆವ್‌ಗೆ ಸೆಮೀಸ್‌ನಲ್ಲಿ ಅಗ್ನಿ ಪರೀಕ್ಷೆ ಎದುರಾಗಲಿದೆ. ಮಹತ್ವದ ಗ್ರ್ಯಾನ್‌ ಸ್ಲಾಂ ಟೂರ್ನಿಯಲ್ಲೆ ಅಲೆಕ್ಸಾಂಡರ್ ಜ್ವರೆವ್, ಇದುವರೆಗೂ ನಡಾಲ್ ಆಗಲಿ ಇಲ್ಲವೇ ಜೋಕೋವಿಚ್ ಎದುರು ಗೆಲುವು ಸಾಧಿಸಿಲ್ಲ.