ಒಂದು ಹಂತದಲ್ಲಿ 63 ರನ್'ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಲಂಕಾ ಪಡೆಗೆ ಮಧ್ಯಮ ಕ್ರಮಾಂಕದಲ್ಲಿ ಲಹೀರು ತಿರುಮನ್ನೆ ಹಾಗೂ ಆ್ಯಂಜಲೋ ಮ್ಯಾಥ್ಯೂಸ್ ಆಸರೆಯಾದರು.

ಕೊಲಂಬೊ(ಸೆ.03): ಭುವನೇಶ್ವರ್ ಕುಮಾರ್ ಅವರ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ ಕೇವಲ 238 ರನ್'ಗಳಿಗೆ ಸರ್ವಪತನ ಕಂಡಿದೆ.

ಇಲ್ಲಿನ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವ ಐದನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ, ಮತ್ತೆ ಹಳೆ ಚಾಳಿಯನ್ನೇ ಮುಂದುವರಿಸಿತು. ಲಂಕಾ ಪಡೆಗೆ ಭುವನೇಶ್ವರ್ ಕುಮಾರ್ ಆರಂಭದಲ್ಲೇ ಆಘಾತ ನೀಡಿದರು. ತಂಡದ ಮೊತ್ತ 14 ರನ್'ಗಳಿದ್ದಾಗ ಆರಂಭಿಕ ಬ್ಯಾಟ್ಸ್'ಮನ್ ನಿರ್ಶೋನ್ ಡಿಕ್'ವೆಲಾ ಅವರನ್ನು ಪೆವಿಲಿಯನ್'ಗೆ ಅಟ್ಟುವಲ್ಲಿ ಭುವಿ ಯಶಸ್ವಿಯಾದರು. ದಿಲ್ಸ್ಯಾನ್ ಮುನವೆರಾ ಆಟ ಕೂಡಾ ಕೇವಲ 2 ರನ್'ಗೆ ಸೀಮಿತವಾಯಿತು. ಆರಂಭದಲ್ಲೇ ಎರಡು ವಿಕೆಟ್ ಬಿದ್ದರೂ ಮತ್ತೊಂದೆಡೆ ನಿರ್ಭೀತಿಯಿಂದ ಬ್ಯಾಟ್ ಬೀಸಿದ ನಾಯಕ ಉಫುಲ್ ತರಂಗಾ(48 ರನ್, 34 ಎಸೆತ) ಕೇವಲ ಎರಡು ರನ್'ಗಳಿಂದ ಅರ್ಧ ಶತಕ ಗಳಿಸುವುದರಿಂದ ವಂಚಿತರಾದರು.

ಒಂದು ಹಂತದಲ್ಲಿ 63 ರನ್'ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಲಂಕಾ ಪಡೆಗೆ ಮಧ್ಯಮ ಕ್ರಮಾಂಕದಲ್ಲಿ ಲಹೀರು ತಿರುಮನ್ನೆ ಹಾಗೂ ಆ್ಯಂಜಲೋ ಮ್ಯಾಥ್ಯೂಸ್ ಆಸರೆಯಾದರು. ಇಬ್ಬರು ತಲಾ ಅರ್ಧಶತಕ ಸಿಡಿಸಿ ತಂಡವನ್ನು ಗೌರವಾನ್ವಿತ ಮೊತ್ತದತ್ತ ಕೊಂಡ್ಯೊಯ್ಯಲು ಪ್ರಯತ್ನಿಸಿದರು. ಲಹೀರು ತಿರುಮನ್ನೆ 67 ರನ್ ಬಾರಿಸಿ ಭುವಿಗೆ ಮೂರನೇ ಬಲಿಯಾದರೆ, 55 ರನ್ ಬಾರಿಸಿ ಆಡುತ್ತಿದ್ದ ಲಂಕಾ ಮಾಜಿ ನಾಯಕ ಆ್ಯಂಜಲೋ ಮ್ಯಾಥ್ಯೂಸ್'ಗೆ ಕುಲ್ದೀಪ್ ಪೆವಿಲಿಯನ್ ಹಾದಿ ತೋರಿಸಿದರು. ಈ ವೇಳೆ ಶ್ರೀಲಂಕಾ ತಂಡದ ಮೊತ್ತ 41 ಓವರ್'ಗಳಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್. ಈ ಇಬ್ಬರು ಬ್ಯಾಟ್ಸ್'ಮನ್'ಗಳು ವಿಕೆಟ್ ಒಪ್ಪಿಸುತ್ತಿದ್ದಂತೆ ದಿಢೀರ್ ಕುಸಿತ ಕಂಡ ಶ್ರೀಲಂಕಾ ಅಂತಿಮವಾಗಿ 49.4 ಓವರ್'ಗಳಲ್ಲಿ 238 ರನ್'ಗಳಿಗೆ ಸರ್ವಪತನ ಕಂಡಿತು.

ಭಾರತ ಪರ ಭವನೇಶ್ವರ್ ಕುಮಾರ್ 5 ವಿಕೆಟ್ ಪಡೆದು ಮಿಂಚಿದರೆ, ಜಸ್ಪ್ರೀತ್ ಬುಮ್ರಾ ಎರಡು ಹಾಗೂ ಕುಲ್ದೀಪ್ ಯಾದವ್ ಹಾಗೂ ಯುಜುವೇಂದ್ರ ಚಾಹಲ್ ತಲಾ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಶ್ರೀಲಂಕಾ : 238/10(49.4 ಓ)

ಲಹೀರು ತಿರುಮನ್ನೆ : 67

ಆ್ಯಂಜಲೋ ಮ್ಯಾಥ್ಯೂಸ್ : 55

ಭುವನೇಶ್ವರ್ ಕುಮಾರ್ : 42/5

ವಿವರ ಅಪೂರ್ಣ